ಕಾರವಾರ: ಭಾರತೀಯ ಕೋಸ್ಟ್ ಗಾರ್ಡ್‌ನ ಪಶ್ಚಿಮ ವಲಯದ ನೂತನ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಂಡ ಕಾರವಾರ ಮೂಲದ ಮನೋಜ್ ಬಾಡ್ಕರ್ ಅವರು ‘ಪಬ್ಲಿಕ್ ನೆಕ್ಸ್ಟ್‌ಗೆ ಮೊದಲ ರಿಯಾಕ್ಷನ್ ನೀಡಿದ್ದಾರೆ. ಈ ವೇಳೆ ಕಡಲ ಭದ್ರತೆ ಹಾಗೂ ಮೀನುಗಾರರ ಸುರಕ್ಷತೆಗೆ ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳುವ ಭರವಸೆಯನ್ನ ಅವರು ನೀಡಿದ್ದಾರೆ.
ಈ ವೇಳೆ ‘ಪಬ್ಲಿಕ್ ನೆಕ್ಸ್ಟ್’ ಪ್ರತಿನಿಧಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ನಾನು ಅಧಿಕಾರ ವಹಿಸಿಕೊಂಡ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಕರ್ನಾಟಕವೂ ಬರುತ್ತದೆ. ಹೀಗಾಗಿ ಇದು ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆಯ ಸಂಗತಿ ಎಂದರು.
ಪಶ್ಚಿಮ ವಲಯದಲ್ಲಿನ ಭದ್ರತೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಮುದ್ರದಲ್ಲಿ ನಮ್ಮ ಮೀನುಗಾರರ ಸುರಕ್ಷತೆಯ ಬಗ್ಗೆ ನಾನು ಭರವಸೆ ನೀಡುವೆ. ಬಹುತೇಕ ಮೀನುಗಾರರು ನನ್ನ ಸ್ನೇಹಿತರು, ಸಹಪಾಠಿಗಳು. ಹೀಗಾಗಿ ಈ ಹುದ್ದೆ ಅವರ ಬಗ್ಗೆ ಹೆಚ್ಚಿನ ಸುರಕ್ಷತೆ ವಹಿಸಲು ದೇವರು ನನಗಾಗಿ ನೀಡಿದ ಒಂದು ಅವಕಾಶ. ಕೋಸ್ಟ್ ಗಾರ್ಡ್ ಮಾಡುತ್ತಿರುವ ಕೆಲಸಗಳನ್ನ ಮುಂದುವರಿಸಲಿದೆ. ಅದರಲ್ಲೂ ಪಶ್ಚಿಮ ವಲಯದ ಗಡಿಗಳಲ್ಲಿನ ಪ್ರತಿಕೂಲತೆಗೆ ಕೆಲಸ ಮಾಡುತ್ತಿವೆ. 24 ಗಂಟೆಯೂ ಕಣ್ಗಾವಲನ್ನು ಇನ್ನೂ ಉತ್ತಮವಾಗಿ ಮುಂದುವರಿಸುತ್ತೇವೆ ಎಂದರು.
ನೌಕಾಪಡೆ ಕಾರವಾರವನ್ನೇ ಕೇಂದ್ರ ಕಚೇರಿಯನ್ನಾಗಿಸಿಕೊಳ್ಳಲು ಹೊರಟಿದ್ದರೆ, ಕೋಸ್ಟ್ ಗಾರ್ಡ್ ತನಗೆ ಸ್ವಂತ ಕಚೇರಿ ಸ್ಥಾಪಿಸಿಕೊಳ್ಳಲು ಹೆಣಗಾಡುತ್ತಿದೆಯಂಬ ಪ್ರಶ್ನೆಗೆ, ಕಾರವಾರದಲ್ಲಿ ಕೋಸ್ಟ್ ಗಾರ್ಡ್ ಚಟುವಟಿಕೆ ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲಾಡಳಿತ ನಮಗೆ ಬೇಕಾದ ಹಾಗೂ ನಮಗೆ ಬಳಕೆಗೆ ಬರುವಂಥ ಜಾಗ ನೀಡಲು ಪ್ರಯತ್ನಿಸುತ್ತಿದ್ದಾರೆ. ಕಾರವಾರದಲ್ಲಿ ಈಗಾಗಲೇ ನಮ್ಮ ಎರಡು ಬೋಟ್‌ಗಳು ಇವೆ. ಹೋವರ್ ಕ್ರಾಫ್ಟ್ ಕೂಡ ಇದ್ದಿದ್ದರಿಂದ ನಮ್ಮದೇ ಜಾಗಕ್ಕಾಗಿ ಹುಡುಕುತ್ತಿದ್ದೇವೆ. ಜಿಲ್ಲಾಡಳಿತ ಕೂಡ ಪ್ರಯತ್ನ ಪಡುತ್ತಿದೆ. ಜಿಲ್ಲಾಡಳಿತ ಹಾಗೂ ನಮಗೆ ಇಬ್ಬರಿಗೂ ಹೊಂದಾಣಿಕೆಯಾಗುವ, ಯಾರಿಗೂ ತೊಂದರೆ ಉಂಟಾಗದಂಥ ಸ್ಥಳ ಸಿಗುತ್ತಿದ್ದಂತೆ ನಮ್ಮ ಕಾರ್ಯಚಟುವಟಿಕೆ ಶುರುವಾಗಲಿದೆ ಎಂದರು. ಇನ್ನು ಕೊನೆಯಲ್ಲಿ, ಶೀಘ್ರವೇ ಕಾರವಾರಕ್ಕೆ ಭೇಟಿ ನೀಡುವುದಾಗಿಯೂ ಅವರು ತಿಳಿಸಿದರು.
PublicNext
12/09/2022 08:59 pm