ಉಡುಪಿ: ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ನೀಲಾವರ ಗೋಶಾಲೆಯಲ್ಲಿ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆ ಅಂಗವಾಗಿ ಮತ್ತು ಇತ್ತೀಚೆಗೆ ರಾಜ್ಯ ಸರಕಾರ ಜಾರಿಗೆ ತಂದ ಗೋಹತ್ಯೆ ನಿಷೇಧ ಕಾಯ್ದೆ ಸ್ವಾಗತಿಸಿ ಗೋಶಾಲೆಯನ್ನು ಸ್ವಚ್ಛಗೊಳಿಸಿ, ಗೋಪೂಜೆ ಮಾಡುವ ಮೂಲಕ ಆಚರಿಸಿದರು.
ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ಮಾತನಾಡಿ, ಅಟಲ್‍ಜೀ ಕೇವಲ ಅಜಾತ ಶತ್ರು ಅಲ್ಲ, ನಿಜಾರ್ಥದಲ್ಲಿ ವಿಶ್ವ ಮಾನವ ಎಂಬುದಕ್ಕೆ ಅವರ ನಡೆ ನುಡಿ ಸಾಕ್ಷಿ. ಅತಿ ಸರಳ ಜೀವನ ಶೈಲಿ ಅಳವಡಿಸಿಕೊಂಡಿದ್ದ ಅಟಲ್ ಜೀ ಯಾರ ಮನಸ್ಸನ್ನೂ ನೋಯಿಸಿದವರಲ್ಲ. ಪ್ರತಿಪಕ್ಷಗಳನ್ನು ಸಹ ಗೌರವಯುತವಾಗಿ ಕಾಣುತ್ತಿದ್ದ ಅವರನ್ನು ಅಜಾತ ಶತ್ರು ಎಂದು ದೇಶದ ಜನತೆ ಕರೆಯುತ್ತಿದ್ದರು ಎಂದರು.
ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ಶ್ವೇತಾ ಮಾತನಾಡಿ, ಅಟಲ್‍ಜೀಯವರು ದೇಶದಲ್ಲಿ ಗೋಹತ್ಯೆ ನಿಷೇಧ ಆಗುವ ಬಗ್ಗೆ ಬಹಳ ಪ್ರಯತ್ನ ಪಟ್ಟಿದ್ದರು. ಈ ಸಮಯದಲ್ಲಿ ರಾಜ್ಯ ಸರಕಾರ ಜಾರಿಗೆ ತಂದ ಗೋಹತ್ಯೆ ನಿಷೇಧದಿಂದ ಅಟಲ್ ಬಿಹಾರಿ ವಾಜಪೇಯಿಯವರ ಅಂದಿನ ಪ್ರಯತ್ನ ಇವತ್ತು ಸಾಕಾರಗೊಂಡಿರುವುದಕ್ಕೆ ಗೋಪ್ರೇಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶರತ್ ಶೆಟ್ಟಿ ಉಪ್ಪುಂದ, ವಿನೋದ್ ಪೂಜಾರಿ ಶಾಂತಿನಿಕೇತನ, ಕಾರ್ಯದರ್ಶಿ ಅಭಿರಾಜ್ ಸುವರ್ಣ ಮತ್ತಿತರ ಯುವಮೋರ್ಚಾ ಜಿಲ್ಲಾ ಮತ್ತು ಮಂಡಲ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
26/12/2020 07:57 pm