ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಪರೇಶ್‌ ಮೇಸ್ತಾ ಸಾವು ಕೊಲೆಯಲ್ಲ; ಆಕಸ್ಮಿಕ - ಸಿಬಿಐ ವರದಿ ಸಲ್ಲಿಕೆ!

ಕಾರವಾರ: ಪರೇಶ್ ಮೇಸ್ತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಹೊನ್ನಾವರ ನ್ಯಾಯಾಲಯಕ್ಕೆ ತನಿಖಾ ವರದಿಯನ್ನು ಸಲ್ಲಿಸಿದ್ದು, ಇದೊಂದು ಆಕಸ್ಮಿಕ ಸಾವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

2017ರ ಡಿಸೆಂಬರ್ 6ರಂದು ಈ ಘಟನೆ ನಡೆದಿತ್ತು. ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ ಪರೇಶ್ ಮೇಸ್ತಾ ಎಂಬ ಯುವಕ ನಾಪತ್ತೆಯಾಗಿದ್ದು, ಬಳಿಕ ಡಿಸೆಂಬರ್ 8ರಂದು ಹೊನ್ನಾವರದಲ್ಲಿ ಈತನ ಮೃತದೇಹ ಪತ್ತೆಯಾಗಿತ್ತು.

ಈ ಪ್ರಕರಣ ರಾಜಕೀಯ ಬಣ್ಣ ಪಡೆದುಕೊಂಡ ಬಳಿಕ ಪ್ರಕರಣದಲ್ಲಿ 5 ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಅಂದಿನ ಸಿಎಂ ಸಿದ್ದರಾಮಯ್ಯನವರು ಈ ಪ್ರಕರಣವನ್ನು ಸಿಬಿಐಗೆ ವಹಿಸಿದ್ದರು. ಇದೀಗ ತನಿಖಾ ವರದಿಯನ್ನು ಸಿಬಿಐ ಹೊನ್ನಾವರ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಇದೊಂದು ಆಕಸ್ಮಿಕ ಸಾವು, ಕೊಲೆಯಲ್ಲ ಎಂದು ಅಭಿಪ್ರಾಯಪಟ್ಟಿದೆ.

ಕೋಮು ಸಂಘರ್ಷಕ್ಕೆ ಕಾರಣವಾಗಿದ್ದ ಘಟನೆ : ಪರೇಶ್ ಮೇಸ್ತನದ್ದು ಕೊಲೆ ಅಂತ ಕುಟುಂಬಸ್ಥರು, ಹಾಗೂ ಬಿಜೆಪಿ, ಹಿಂದೂ ಸಂಘಟನೆಗಳು ಆರೋಪಿಸಿದ್ದವು. ಪರೇಶ್ ಮೇಸ್ತನನ್ನು ಅನ್ಯ ಕೋಮಿನ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆಂದು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದರು. ಮೇಸ್ತಾನನ್ನು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು, ಹಿಂದೂ ಕಾರ್ಯಕರ್ತ ಎಂದು ಬಿಂಬಿಸಿದ್ದರಿಂದ ಈ ಘಟನೆ ಕರಾವಳಿಯಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು.

ಪರೇಶ್ ಮೇಸ್ತನನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪ ಬಲವಾಗಿ ಕೇಳಿಬಂತು. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಹೊನ್ನಾವರ, ಕುಮಟಾ, ಮುಂಡಗೋಡದಲ್ಲಿ ಹಿಂದೂಪರ ಸಂಘಟನೆಗಳು ಡಿಸೆಂಬರ್‌ 11ರಂದು ಬಂದ್‌ಗೆ ಕರೆ ನೀಡಿದವು. ಕುಮಟಾದಲ್ಲಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಐಜಿಪಿ ಅವರ ಕಾರಿಗೆ ಬೆಂಕಿ ಹಚ್ಚಲಾಯಿತು. ಪೊಲೀಸರ ಮೇಲೆ ಕಲ್ಲು ತೂರಲಾಯಿತು. ಘಟನೆಯಲ್ಲಿ ಹಲವಾರು ಪೊಲೀಸರು ಗಾಯಗೊಂಡರು, ವಾಹನಗಳು ಜಖಂಗೊಂಡಿದ್ದವು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಹಲವು ಸಂಘಪರಿವಾರದ ಕಾರ್ಯರ್ತರ ಹತ್ಯೆಯಾಗಿದೆ ಎಂದು ಆರೋಪಿಸುತ್ತಿದ್ದ ಬಿಜೆಪಿ, ಪರೇಶ್ ಮೇಸ್ತಾ ಹೆಸರನ್ನು ಪಟ್ಟಿಯಲ್ಲಿ ಸೇರಿಸುತ್ತಿತ್ತು. ಈ ನಡುವೆ ಸಿಬಿಐ ಈಗ ಬಿ ರಿಪೋರ್ಟ್‌ ಸಲ್ಲಿಸಿದೆ.

Edited By : PublicNext Desk
PublicNext

PublicNext

04/10/2022 03:13 pm

Cinque Terre

13.66 K

Cinque Terre

3

ಸಂಬಂಧಿತ ಸುದ್ದಿ