ಕಂಬಳ ಓಟದಲ್ಲಿ 'ಉಸೇನ್ ಬೋಲ್ಟ್' ದಾಖಲೆಯನ್ನು ಮೀರಿಸಿರೋದು ಸುಳ್ಳು ಎಂಬ ಮುಚ್ಚೂರು ಕಲ್ಕುಡ ಲೋಕೇಶ್ ಶೆಟ್ಟಿಯವರು ಆರೋಪಿಸಿ ಪೊಲೀಸ್ ದೂರು ದಾಖಲಿಸಿರುವುದನ್ನು ಖಂಡಿಸಿರುವ ಕಂಬಳದ ಯಜಮಾನರು ಕಂಬಳ ಓಟಗಾರ ಶ್ರೀನಿವಾಸ ಗೌಡರಿಗೆ ಬೆಂಬಲವನ್ನು ಸೂಚಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಜಿಲ್ಲಾ ಕಂಬಳ ಸಮಿತಿಯ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಮಾತನಾಡಿ, ಕಂಬಳ ಓಟದಲ್ಲಿ ಶ್ರೀನಿವಾಸ ಗೌಡರ ಸಾಧನೆಯನ್ನು ಸಹಿಸದ ಲೋಕೇಶ್ ಶೆಟ್ಟಿಯವರು ಈ ರೀತಿ ಆಪಾದನೆ ಮಾಡುತ್ತಿದ್ದಾರೆ. ಕಂಬಳ ಓಟದಲ್ಲಿ ಸಾಕಷ್ಟು ಮಂದಿಸಾಧನೆ ಮಾಡಿದ್ದಾರೆ. ಆದರೆ ಶ್ರೀನಿವಾಸ ಗೌಡರ ಅದೃಷ್ಟದಿಂದ ಅವರಿಗೆ ನೇಮ್ ಆ್ಯಂಡ್ ಫೇಮ್ ದೊರಕಿದೆ. ಆದರೆ ಈ ಗೌರವಗಳಿಗೆ ಚ್ಯುತಿ ಬರುವಂತೆ ಮಾಡಲು ಈ ರೀತಿಯಲ್ಲಿ ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತಿದೆ.
ಲೋಕೇಶ್ ಶೆಟ್ಟಿಯವರು 2020ರಲ್ಲಿ ಕಂಬಳ ಸಿನಿಮಾ ನಿರ್ಮಾಣ ಮಾಡಲು ರಿಜಿಸ್ಟ್ರೇಷನ್ ಮಾಡಿ ಶ್ರೀನಿವಾಸ ಗೌಡರನ್ನು ಈ ಸಿನಿಮಾದಲ್ಲಿ ನಟಿಸಬೇಕೆಂದು ಕೇಳಿಕೊಂಡಿದ್ದರು. ಆದರೆ ಶ್ರೀನಿವಾಸ ಗೌಡ ಒಪ್ಪಿಗೆ ನೀಡಿರಲಿಲ್ಲ. ಇದೀಗ ಅವರು ರಾಜೇಂದ್ರ ಬಾಬು ಸಿಂಗ್ ಅವರ ಬಿರ್ದ್ ದ ಕಂಬಳ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಕಾರಣಕ್ಕೆ ಅವರು ತೇಜೋವಧೆ ಮಾಡಲು ಹೊರಟಿದ್ದಾರೆ ಎಂದು ಶಂಕೆ ಮೂಡುತ್ತಿದೆ. ಅಲ್ಲದೆ ಕಳೆದ ಬಾರಿ ಪ್ರಶಾಂತ್ ಬಂಗೇರ ಎಂಬವನ ಮುಖಾಂತರ ಇದೇ ಲೋಕೇಶ್ ಶೆಟ್ಟಿಯವರು ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಕಂಬಳ ಸಮಿತಿಯ ನಾಲ್ಕು ಗೋಡೆಯ ಒಳಗೆ ಇತ್ಯರ್ಥವಾಗಬೇಕಿದ್ದ ಈ ವಿಚಾರವನ್ನು ದುರುದ್ದೇಶದಿಂದ ಬೀದಿಗೆ ಬರುವಂತೆ ಮಾಡಲಾಗುತ್ತಿದೆ. ಇದೀಗ ಕಂಬಳದ ವಿಚಾರವು ಠಾಣೆಯ ಮೆಟ್ಟಿಲೇರೋದು ವಿಷಾದನೀಯ. ಆದ್ದರಿಂದ ಸಮಾಜದ ಮುಂದೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿರುವ ಮುಚ್ಚೂರು ಕಲ್ಕುಡ ಲೋಕೇಶ್ ಶೆಟ್ಟಿಯವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗುತ್ತದೆ ಎಂದು ರಶ್ಮಿತ್ ಶೆಟ್ಟಿಯವರು ಹೇಳಿದರು.
Kshetra Samachara
23/07/2022 04:41 pm