ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ತಗ್ಗರ್ಸೆ ಕಂಬಳೋತ್ಸವ ಸಮಾಪನ; 60 ಜೊತೆ ಕೋಣಗಳ ಓಟ ವೈಭವ

ಬೈಂದೂರು: ಉಡುಪಿ ಜಿಲ್ಲೆ ಬೈಂದೂರು ಸಮೀಪದ ತಗ್ಗರ್ಸೆ ಸಾಂಪ್ರದಾಯಿಕ ಕಂಬಳೋತ್ಸವ ಭಾನುವಾರ ಕಂಠದಮನೆ ಕುಟುಂಬಸ್ಥರಿಗೆ ಸೇರಿದ ಕಂಬಳಗದ್ದೆಯಲ್ಲಿ ನಡೆಯಿತು. 60ಕ್ಕೂ ಅಧಿಕ ಜೊತೆ ಕೋಣಗಳು ಹರಕೆ ಹಾಗೂ ಸ್ವರ್ಧೆಯಲ್ಲಿ ಭಾಗವಹಿಸಿತು.

ಕಂಠದಮನೆ ಟಿ. ನಾರಾಯಣ ಹೆಗ್ಡೆ ಕುಟುಂಬದವರಿಂದ ಈ ಕಂಬಳ ವರ್ಷಂಪ್ರತಿ ನಡೆಯುತ್ತಿದ್ದು, ಈ ಬಾರಿ 'ಸೆನ್ಸಾರ್' ಮೂಲಕ ಕೋಣದ ಓಟದ ವೇಗಮಿತಿ ಅಳೆಯುವ ಸಾಧನ ಅಳವಡಿಸಲಾಗಿತ್ತು.

ಬೈಂದೂರು‌ ವ್ಯಾಪ್ತಿಯಲ್ಲಿ ಅತಿ ದೊಡ್ಡ ಕಂಬಳ ಎಂಬ ಹಿರಿಮೆಗೆ ಪಾತ್ರವಾದ ತಗ್ಗರ್ಸೆ ಕಂಬಳದ ದಿನ ಬೆಳಿಗ್ಗೆ ಗದ್ದೆ ಅಲಂಕಾರ, ದೈವ-ದೇವರ ಪೂಜೆ ನೆರವೇರಿದ ಬಳಿಕ ಮಧ್ಯಾಹ್ನ ಕೋಣಗಳನ್ನು ವೀಳ್ಯ, ತೆಂಗಿನಕಾಯಿ ನೀಡಿ ಬರಮಾಡಿಕೊಳ್ಳಲಾಯಿತು. ಊರಿನ ನಿರ್ದಿಷ್ಟ ಕುಟುಂಬದ ಕೋಣಗಳನ್ನು ಗದ್ದೆಗೆ ಇಳಿಸಿ, ಕಂಬಳಕ್ಕೆ ಹಸಿರು‌ ನಿಶಾನೆ ನೀಡಲಾಯಿತು.ಮೆರವಣಿಗೆಯಲ್ಲಿ ಸಾಗಿಬಂದ ಕೋಣಗಳ ಪೈಕಿ ಕೆಲವನ್ನು ಕಂಬಳ ಗದ್ದೆಯಲ್ಲಿ ಹರಕೆ ಸಲುವಾಗಿ ಓಡಿಸಲಾಯಿತು. ಉಳಿದ ಕೋಣಗಳು ಹಗ್ಗ ಹಾಗೂ ಹಲಗೆ ವಿಭಾಗದ ಸ್ವರ್ಧೆಯಲ್ಲಿ ಪಾಲ್ಗೊಂಡವು.

ಇಲ್ಲಿನ ಕಾರಿಕಟ್ಟೆ ಮನೆತನದ ಕೋಣಗಳು ಈ ಕಂಬಳ ಗದ್ದೆಗೆ ವಿಶೇಷ ವೇಷಭೂಷಣ, ವಾದ್ಯ, ಚೆಂಡೆ, ಡೋಲು ವಾದನ ಜೊತೆ ಹೆಜ್ಜೆ ಹಾಕಿ ಬರುವುದು ರೂಢಿ. ಕಳೆದ 37 ವರ್ಷಗಳಿಂದ ಬೈಂದೂರು ವಲಯ ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ‌ ನೇತೃತ್ವದಲ್ಲಿ ಮನೆಯಲ್ಲಿ ಪೂಜಾ ವಿಧಿ ನಡೆಸಿ ಕಂಬಳಗದ್ದೆಗೆ ಕೋಣಗಳನ್ನು ಕರೆತರಲಾಯಿತು.

ಕಂಬಳ ಸಮಿತಿ ಪ್ರಮುಖರಾದ ಶಾಂತಾರಾಮ ಶೆಟ್ಟಿ ಬಾರ್ಕೂರು, ಬೈಂದೂರು ವಲಯ ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ, ವಸಂತ ಹೆಗ್ಡೆ ಕಂಟದಮನೆ, ಟಿ. ಬಾಬು ಶೆಟ್ಟಿ ತಗ್ಗರ್ಸೆ, ಸುಭಾಶ್ಚಂದ್ರ ಶೆಟ್ಟಿ ಕೂರಾಡಿ ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

29/11/2021 11:42 am

Cinque Terre

17.39 K

Cinque Terre

0

ಸಂಬಂಧಿತ ಸುದ್ದಿ