ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ವಿದ್ಯಾಸಂಸ್ಥೆಗಳಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಕಟೀಲು ಭ್ರಮರಾಂಬೆಗೆ ಸೀರೆ ಹಾಗೂ ಹೂವುಗಳಿಂದ ತ್ರಿವರ್ಣದಲ್ಲಿ ವಿಶಿಷ್ಟ ಅಲಂಕಾರ ಮಾಡಲಾಗಿತ್ತು. ದೇಗುಲಕ್ಕೆ ಬಂದ ಭಕ್ತರಿಗೆ ಹದಿನೈದು ಸಾವಿರ ಲಾಡುಗಳನ್ನು ವಿತರಿಸಲಾಯಿತು.
ರಥಬೀದಿಯಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಹಾಗೂ ಭಕ್ತರ ಸಮ್ಮುಖದಲ್ಲಿ ಪೆರ್ಮುದೆ ಗಿರೀಶ್ ಶೆಟ್ಟಿ ಧ್ವಜಾರೋಹಣಗೈದರು.
ಬಳಿಕ ಪದವಿ ಕಾಲೇಜಿನವರೆಗೆ ಭಾರತಮಾತೆಯ ಭಾವಚಿತ್ರದ ಮೆರವಣಿಗೆ ಆನೆ, ಎರಡೂವರೆ ಸಾವಿರ ವಿದ್ಯಾರ್ಥಿಗಳಿಂದ ಜೈಕಾರದೊಂದಿಗೆ ನಡೆಯಿತು. ವಿದ್ಯಾರ್ಥಿಗಳು ದೇಶಭಕ್ತಿಗೀತೆಗಳನ್ನು ಹಾಡಿ ಭಾರತಾಂಬೆಗೆ ನುಡಿನಮನ ಸಲ್ಲಿಸಿದರು.
ಶಿಕ್ಷಣ ಸಂಸ್ಥೆಗಳ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣಗೈದ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಮಾತನಾಡಿ, ಗಿಡ ನೆಡುವುದು, ದೇಶದ ಒಳಿತಿಗೆ ಶ್ರಮಿಸುವುದು ಹೀಗೆ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ರಾಷ್ಟ್ರಪ್ರೇಮದಿಂದ ದೇಶಕಟ್ಟುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕೆಂದರು. ಸ್ಪರ್ಧಾವಿಜೇತರಿಗೆ ಬಹುಮಾನ ವಿತರಿಸಲಾಯಿತು.
ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಸನತ್‌ಕುಮಾರ್ ಶೆಟ್ಟಿ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಬಿಪಿನ್‌ಚಂದ್ರ ಶೆಟ್ಟಿ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ. ಕೃಷ್ಣ, ಕುಸುಮಾವತಿ, ಸೋಮಪ್ಪ ಅಲಂಗಾರು, ಚಂದ್ರಶೇಖರ್, ಸರೋಜಿನಿ ಮತ್ತಿತರರಿದ್ದರು. ಸಂತೋಷ್ ಆಳ್ವ, ಸಾಯಿನಾಥ ಶೆಟ್ಟಿ ನಿರೂಪಿಸಿದರು.
Kshetra Samachara
15/08/2022 07:33 pm