ಮೂಡುಬಿದಿರೆ: ಸರಕಾರದ ಹಲವಾರು ಯೋಜನೆಗಳ ಬಗ್ಗೆ ಪಟ್ಟಣದ ಜನರಿಗೆ ಮಾತ್ರ ಗೊತ್ತಿರುತ್ತದೆ ಆದರೆ ಗ್ರಾಮೀಣ ಪ್ರದೇಶದ ಫಲಾನುಭವಿಗಳ ಗಮನಕ್ಕೆ ಬಂದಿರುವುದಿಲ್ಲ. ಇದನ್ನು ಮನಗಂಡಿರುವ ಜಿಲ್ಲಾಧಿಕಾರಿಗಳು ಸಮಾಜದಲ್ಲಿರುವ ಕಟ್ಟ ಕಡೆಯ ವ್ಯಕ್ತಿಗೂ ಸರಕಾರದ ಸವಲತ್ತುಗಳು ತಲುಪಿ ವಿವಿಧ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆನ್ನುವ ಉದ್ದೇಶದಿಂದ ತಹಶೀಲ್ದಾರ್ ಅವರು ಗ್ರಾಮಗಳಿಗೆ ತೆರಳಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮೂಡುಬಿದಿರೆ ತಾಲೂಕು ತಹಶೀಲ್ದಾರ ಪುಟ್ಟುರಾಜು ತಿಳಿಸಿದರು.
ಅವರು ಕಂದಾಯ ಇಲಾಖೆಯ ವತಿಯಿಂದ ಶಿರ್ತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಕೊಣಾಜೆ, ಪಡುಕೊಣಾಜೆ ಗ್ರಾಮಗಳ ಕಂದಾಯ ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟ ಸಮಸ್ಯೆಗಳ ಅರ್ಜಿ ವಿಲೇವಾರಿ ಮಾಡಲು ಶಿರ್ತಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ "ತಹಶೀಲ್ದಾರ್ ಗ್ರಾಮ ವಾಸ್ತವ್ಯ" ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಂಚಾಯತ್ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮೂಡುಕೊಣಾಜೆ ಗ್ರಾಮದ ಚೀಮುಳ್ಳ ಗುಡ್ಡೆ, ಪಡುಕೊಣಾಜೆಯ ಕಂಚರ್ಲಗುಡ್ಡೆ, ಶಿರ್ತಾಡಿಯ ಕಜೆ ಮತ್ತು ಮಕ್ಕಿ ಮತ್ತು ಹೌದಾಲ್‌ನ ಬಿಲ್ಲುಗುಡ್ಡೆ ಮುಂತಾದ ಕಡೆಗಳಲ್ಲಿ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ, ನಿವೇಶನ, ಪಿಂಚಣಿ ಮುಂತಾದ ಸಮಸ್ಯೆಗಳ ಬಗ್ಗೆ ಆಲಿಸಿ ಪರಿಹಾರದ ಬಗ್ಗೆ ತಿಳಿಸಿದರು.
ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿಯನ್ನು ನೀಡಿದರು. ಪಂಚಾಯತ್ ಸದಸ್ಯರಾದ ಸಂತೋಷ್ ಶೆಟ್ಟಿ, ರಾಜೇಶ್ ಫೆರ್ನಾಂಡಿಸ್,ಆಗ್ನೇಸ್, ಲತಾ ಹೆಗ್ಡೆ, ಪ್ರವೀಣ್ ಜೈನ್, ಕಂದಾಯ ನಿರೀಕ್ಷಕ ದಿಲೀಪ್ ರೋಡ್ಕರ್ ಮತ್ತಿತರರು ಈ ಸಂದರ್ಭದಲ್ಲಿದ್ದರು.
ಪಿಂಚಣಿ 20, ರೇಶನ್ ಕಾರ್ಡಿಗೆ 20 ಅರ್ಜಿಗಳನ್ನು ಸ್ವೀಕರಿಸಲಾಗಿದೆ. 94ಸಿಗೆ ಸಂಬಂಧ ಪಟ್ಟ ಡೀಮ್ಡ್ ಫಾರೆಸ್ಟ್ ಸಮಸ್ಯೆ ಇಲ್ಲದ 25 ಅರ್ಜಿಗಳನ್ನು ಮುಂದಿನ ಕ್ರಮಕ್ಕೆ ಸ್ವೀಕರಿಸಲಾಗಿದೆ. ಅಧ್ಯಕ್ಷ ಸಂತೋಷ್ ಕೋಟ್ಯಾನ್ ಅವರ ಮನೆ ಬಳಿ 20 ಎಕ್ರೆ ಜಾಗವನ್ನು ನಿವೇಶನ ಮತ್ತು ರುದ್ರಭೂಮಿಗೆ ಪರಿಶೀಲನೆ ನಡೆಸಲಾಯಿತು.
Kshetra Samachara
17/04/2022 07:18 pm