ಪ್ರಧಾನಿ ನರೇಂದ್ರ ಮೋದಿಯವರ ಮನೆಯ ಕಪಾಟಿನಲ್ಲಿದ್ದ ಶ್ರೀ ಕಾರ್ತಿಕೇಯ ದೇವರಿಗೆ ಉಡುಪಿಯಲ್ಲಿ ನಿತ್ಯಪೂಜೆ ನಡೆಯುತ್ತಿದೆ! ಮೋದಿಯವರ ಅಭಿಮಾನಿಯೊಬ್ಬರು ಏನೇ ತಪ್ಪಿಸಿದರೂ ಇದಕ್ಕೆ ಪೂಜೆ ಮಾಡುವುದನ್ನು ಮಾತ್ರ ತಪ್ಪಿಸುವುದಿಲ್ಲ.ಇಷ್ಟಕ್ಕೂ ಇವರು ಯಾರು? ಈ ಸ್ಟೋರಿ ನೋಡಿ...
ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಸಂದರ್ಭ ಮತ್ತು ಇತರೆ ಸಮಾರಂಭಗಳಲ್ಲಿ ಅವರಿಗೆ ಉಡುಗೊರೆಗಳು ಸಿಗುತ್ತವೆ. ಅಂತಹ ಉಡುಗೊರೆಗಳ ಭಂಡಾರವೇ ಪ್ರಧಾನಿ ನಿವಾಸದಲ್ಲಿದೆ. ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ಉಡುಗೊರೆ ರೂಪದಲ್ಲಿ "ಕಾರ್ತಿಕೇಯ" ದೇವರ ಫೋಟೋ ನೀಡಿದ್ದರು. ಮೋದಿಯವರಿಗೆ ಉಡುಗೊರೆ ರೂಪದಲ್ಲಿ ನೀಡಿದ ದೇವರ ಪೋಟೋವನ್ನು ಉಡುಪಿಯ ಅಂಬಲಪಾಡಿಯ ನಿವಾಸಿ, ಲೆಕ್ಕಪರಿಶೋಧಕ ಕೆ.ರಂಗನಾಥ್ ಆಚಾರ್ ಹರಾಜಿನಲ್ಲಿ ಖರೀದಿಸಿ ತಂದಿದ್ದಾರೆ.
ಮಾತ್ರವಲ್ಲ, ತಮ್ಮ ಮನೆಯ ದೇವರ ಕೋಣೆಯಲ್ಲಿಟ್ಟು ನಿತ್ಯ ಪೂಜೆ ನಡೆಸುತ್ತಿದ್ದಾರೆ. ಪ್ರಧಾನಿಯವರು ಉಡುಗೊರೆಯ ಹರಾಜಿನಿಂದ ಬಂದ ಹಣವನ್ನು ನಮಾಮಿ ಗಂಗಾ ಯೋಜನೆಗೆ ಬಳಸುತ್ತೇವೆ ಎಂದು ಘೋಷಿಸಿದ್ದರು. ಇದರಿಂದ ಪ್ರೇರಣೆಗೊಂಡ ರಂಗನಾಥ್ ಆಚಾರ್ ಪ್ರಧಾನಿ ಕಚೇರಿಯ ಅಧಿಕೃತ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಇದನ್ನು ತರಿಸಿದ್ದಾರೆ.
ಪತ್ರಿಕೆಯೊಂದರಲ್ಲಿ ಹರಾಜಿನ ಬಗ್ಗೆ ಮಾಹಿತಿ ತಿಳಿದು ಭಾಗವಹಿಸಿದೆ. ಸುಬ್ರಹ್ಮಣ್ಯ ದೇವರ ಪೋಟೊವನ್ನು ಖರೀದಿಸಿದ್ದೇನೆ. ಈ ಹಣವನ್ನು ನಮಾಮಿ ಗಂಗಾ ಯೋಜನೆಗೆ ಬಳಸುತ್ತಾರೆ ಎಂದು ತಿಳಿದು ಸಂತೋಷವಾಯಿತು. ಈ ಮಹತ್ ಕಾರ್ಯಕ್ಕೆ ನನ್ನ ಕಿಂಚಿತ್ತು ಸೇವೆ ನೀಡಿದ್ದು ಖುಷಿ ತಂದಿದೆ ಅಂತಾರೆ ಇವರು.
ರಂಗನಾಥ್ ಆಚಾರ್ ಈ ವರ್ಷವೂ ಹರಾಜಿನಲ್ಲಿ ಭಾಗವಹಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಗೆಳೆಯರೂ ಕೂಡ ಇವರ ಪ್ರೇರಣೆಯಿಂದ ಈ ವರ್ಷ ಹರಾಜಿನಲ್ಲಿ ಮೋದಿ ಉಡುಗೊರೆ ಖರೀದಿಸುವ ಉತ್ಸಾಹ ತೋರಿದ್ದಾರೆ. ಒಟ್ಟಾರೆ, ವ್ಯಕ್ತಿಯ ಮೇಲಿನ ಅಭಿಮಾನವನ್ನು ಈ ರೀತಿಯೂ ಪ್ರಕಟಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ರಂಗನಾಥ್ ಆಚಾರ್.
ವಿಶೇಷ ವರದಿ: ರಹೀಂ ಉಜಿರೆ
PublicNext
14/09/2022 05:01 pm