ಮಂಗಳಮುಖಿಯರಲ್ಲಿ ಕೆಲವರು ಇತ್ತೀಚೆಗೆ ವಿಜೆ, ಆರ್‌ಜೆ, ನಟಿ, ಮಾಡೆಲ್‌ಗಳಾಗಿ ಗುರುತಿಸಿಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಇವರು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಮಾನ್ಯ ಜನರಂತೆ ಬಾಳುವ ನಿರಂತರ ಯತ್ನದಲ್ಲಿದ್ದಾರೆ. ಅಂಥವರ ಸಾಲಿನಲ್ಲಿಯೇ ಗುರುತಿಸಿಕೊಳ್ಳಲು ಮಂಗಳೂರಿನ ನಾಲ್ವರು ಮಂಗಳಮುಖಿಯರು ವಿಭಿನ್ನ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಹೌದು... ಸಂಧ್ಯಾ, ಪ್ರಿಯಾ, ಹನಿ ಹಾಗೂ ರೇಖಾ ಎಂಬ ಮಂಗಳಮುಖಿಯರು ಡಾನ್ಸ್ ಕಲಿಕೆಯತ್ತ ಒಲವು ತೋರಿದ್ದಾರೆ. ಎಲ್ಲರಂತೆ ತಾವೂ ಗುರುತಿಸಬೇಕೆಂಬ ಹಂಬಲವನ್ನು ಹೊಂದಿರುವ ಇವರು ಛಲದಿಂದ ಬಾಲಿವುಡ್ ಸ್ಟೈಲ್ ನೃತ್ಯವನ್ನು ಅಭ್ಯಸಿಸುತ್ತಿದ್ದಾರೆ. ಇದಕ್ಕೆ ಅವರು ಎದುರಿಸಿದ ಸವಾಲು ಹಲವಾರು. ಇವರಿಗೆ ಡಾನ್ಸ್ ಕಲಿಯುವ ಹುಮ್ಮಸ್ಸು ಇದ್ದರೂ, ಮೊದಲಿಗೆ ಯಾರೂ ಇವರಿಗೆ ಕಲಿಸಲು ಮುಂದೆ ಬಂದಿರಲಿಲ್ಲ. ಆದರೂ ಛಲ ಬಿಡದ ಇವರಿಗೆ ಮೋಹನ್ ಎಂಬವರು ಸುಸೆನ್ ಮಿಸ್ಕಿತ್ ಎಂಬವರ ಪರಿಚಯ ಮಾಡುತ್ತಾರೆ. ಅವರು ಈ ಮಂಗಳಮುಖಿಯರಿಗೆ ಡಾನ್ಸ್ ಕಲಿಸಲು ಮುಂದೆ ಬರುತ್ತಾರೆ.
ಇದೀಗ ಕಳೆದ ಎರಡು ವಾರಗಳಿಂದ ನಗರದ ಮಣ್ಣಗುಡ್ಡೆಯಲ್ಲಿ ಡಾನ್ಸ್ ಅಭ್ಯಾಸ ಮಾಡುತ್ತಿದ್ದಾರೆ. ಅದಕ್ಕಾಗಿ ಅವರು ಹತ್ತಾರು ಮೈಲು ದೂರದ ಕಾನದಿಂದ ಬಂದು ಒಂದು ಗಂಟೆಯನ್ನು ವಿನಿಯೋಗಿಸುತ್ತಿದ್ದಾರೆ. ಬೆಳಗ್ಗಿನ ಹೊತ್ತು 10 ರಿಂದ 11ಗಂಟೆಯವರೆಗೆ ಡಾನ್ಸ್ ತರಬೇತಿ ಪಡೆದು ತಮ್ಮ ನಿತ್ಯದ ಕಾರ್ಯಕ್ಕೆ ಹೋಗುತ್ತಾರೆ. ಈ ತರಬೇತಿಯ ಬಳಿಕ ತಾವು ಉತ್ತಮ ವೇದಿಕೆಗಳಲ್ಲಿ ನೃತ್ಯ ಪ್ರದರ್ಶಿಸಿ ಎಲ್ಲರ ನಡುವೆ ಗುರುತಿಸಿಬೇಕೆಂಬ ಹಂಬಲವನ್ನು ಈ ಮಂಗಳಮುಖಿಯರು ಹೊಂದಿದ್ದಾರೆ. ಅದೇ ರೀತಿ ಮಂಗಳಮುಖಿಯರೆಂದು ತಾತ್ಸಾರ ಮಾಡದೆ ಅವರಿಗೂ ಡಾನ್ಸ್ ಕಲಿಕೆಗೆ ಮುಂದೆ ಬಂದಿರುವ ಸುಸೆನ್ ಮಿಸ್ಕಿತ್ ಹಾಗೂ ಮೋಹನ್ ಅವರ ಹೃದಯ ವೈಶಾಲ್ಯತೆಗೆ ತಲೆದೂಗಲೇ ಬೇಕು.
ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು
PublicNext
12/09/2022 07:35 pm