ಉಳ್ಳಾಲ: ಸರಕಾರದ ಪ್ರಾಯೋಜಕತ್ವದಲ್ಲಿ ನಡೆದ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಶಾಸಕ ಖಾದರ್ ಪಕ್ಕದಲ್ಲಿ ಸ್ಥಳೀಯ ಹಿಂದೂ ಗರ್ಭಿಣಿಯ ಭಾವಚಿತ್ರ ಇರುವ ಫ್ಲೆಕ್ಸ್ ಅನುಮತಿ ಇಲ್ಲದೇ ಅಳವಡಿಸಿರುವ ವಿರುದ್ಧ ಭಜರಂಗದಳದ ಕಾರ್ಯಕರ್ತರು ಪ್ರತಿಭಟಿಸಿದ್ದು ಆಯೋಜಕರು ತಕ್ಷಣ ವಿವಾದಿತ ಫ್ಲೆಕ್ಸ್ನ್ನ ತೆರವುಗೊಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ,ಗ್ರಾಮಾಂತರ ತಾಲೂಕು ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮದ ಅಂಗವಾಗಿ ಕೊಲ್ಯದ ನಾರಾಯಣ ಗುರು ಸಭಾಂಗಣದಲ್ಲಿ ಬುಧವಾರ ಸಾಮೂಹಿಕ ಸೀಮಂತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸಭಾಂಗಣದ ಹೊರಗಡೆ ಹಾಕಿರುವ ಫ್ಲೆಕ್ಸ್ನಲ್ಲಿ ಉಳ್ಳಾಲ ಶಾಸಕ ಯು.ಟಿ ಖಾದರ್ ಮತ್ತು ಅವರ ಪಕ್ಕದಲ್ಲಿ ಸ್ಥಳೀಯ ಹಿಂದೂ ಗರ್ಭಿಣಿಯೋರ್ವರ ಭಾವಚಿತ್ರಗಳನ್ನ ಹಾಕಲಾಗಿತ್ತು. ಕಾರ್ಯಕ್ರಮದ ಆಯೋಜಕರು ಈ ಫ್ಲೆಕ್ಸ್ನಲ್ಲಿ ಸ್ಥಳೀಯ ಹಿಂದೂ ಕಾರ್ಯಕರ್ತನ ಸಹೋದರಿ ಗರ್ಭಿಣಿಯಾಗಿದ್ದ ಭಾವಚಿತ್ರವನ್ನ ಅನುಮತಿ ಇಲ್ಲದೆ ಜಾಲತಾಣದಿಂದ ನಕಲು ಮಾಡಿ ಮುದ್ರಿಸಿದ್ದರು. ಇದರ ವಿರುದ್ಧ ಬಜರಂಗದಳದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೀಮಂತ ಕಾರ್ಯಕ್ರಮದ ಸಭಾಂಗಣಕ್ಕೆ ನುಗ್ಗಿದ ಬಜರಂಗದಳ ಕಾರ್ಯಕರ್ತರು ಹಿಂದೂ ವಿರೋಧಿ ಖಾದರ್ ಎಂದು ಧಿಕ್ಕಾರ ಕೂಗಿದ್ದಾರೆ. ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಮಣಿದ ಕಾರ್ಯಕ್ರಮದ ಆಯೋಜಕರು ಕೂಡಲೇ ಫ್ಲೆಕ್ಸ್ನ್ನ ತೆರವುಗೊಳಿಸಿದ್ದಾರೆ. ಆಯೋಜಕರು ಮಾಡಿದ ಎಡವಟ್ಟಿಂದ ಸರಕಾರಿ ಪ್ರಾಯೋಜಕತ್ವದಲ್ಲಿ ನಡೆದ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಅನಾವಶ್ಯಕ ಗೊಂದಲ ನಡೆಯುವಂತಾಯಿತು.
Kshetra Samachara
28/09/2022 06:04 pm