ಮಂಗಳೂರು: ಮುಸ್ಲಿಂ ಮೂಲಭೂತವಾದ ಹಾಗೂ ಹಿಂದುತ್ವದ ಧ್ರುವೀಕರಣ ನೀತಿಯ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆ ನಲುಗುತ್ತಿದೆ. ಇದು ಜಿಲ್ಲೆಯ ಅಭಿವೃದ್ಧಿಗೆ ತೊಡಕಾಗಿ ಪರಿಣಮಿಸಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಹೇಳಿದ್ದಾರೆ.
ಮಂಗಳೂರಿನ ಬಾಲಂಭಟ್ ಹಾಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಪಂಚಾದ್ಯಂತ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಕೊಡುಗೆಯಿದೆ. ಆದರೆ, ಇತ್ತೀಚೆಗೆ ಜಿಲ್ಲೆಯ ಬಗ್ಗೆ ಅಪನಂಬಿಕೆ ಹೆಚ್ಚುತ್ತಿದೆ. ಇದು ಯುವಜನರ ಬದುಕನ್ನು ನಾಶ ಮಾಡುತ್ತಿದೆ. ಯಾವುದೇ ಯುವಕರು ದಕ್ಷಿಣ ಕನ್ನಡ ಜಿಲ್ಲೆಗೆ ಉದ್ಯೋಗ ಅರಸಿಕೊಂಡು ಬರುತ್ತಿಲ್ಲ. ಯಾವುದೇ ಕಂಪೆನಿಗಳು ಜಿಲ್ಲೆಯಲ್ಲಿ ಉದ್ಯಮ ಆರಂಭಿಸಲು ಇಷ್ಟ ಪಡುತ್ತಿಲ್ಲ. ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆ ವೃದ್ಧಾಶ್ರಮದ ತರಹ ಆಗಿ ಇಲ್ಲಿ ಸೀನಿಯರ್ ಸಿಟಿಜನ್ ಉಳಿದುಕೊಳ್ಳುತ್ತಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯವರು ಬೇರೆ ಕಡೆಗೆ ಹೋಗಿ ಸಾಧನೆ ಮಾಡಿದ್ದಾರೆ. ಆದರೆ, ಹೊರಗಿನಿಂದ ಬಂದು ಇಲ್ಲಿ ಸಾಧನೆ ಮಾಡುವುದು ತುಂಬಾ ಕಡಿಮೆ. ಇದನ್ನು ನಿಲ್ಲಿಸಬೇಕಾಗಿದೆ. ಬಿಜೆಪಿ ಹಿಂದುತ್ವದ ಬಗ್ಗೆ ಒಲವು ತೋರಿದರೆ, ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗದ ಬಗ್ಗೆ ಒಲವು ತೋರುತ್ತಿದೆ. ಆದರೆ, ಆಮ್ ಆದ್ಮಿ ಪಕ್ಷದ ಸಿದ್ಧಾಂತ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಈ ಚಿಂತನೆ ದಕ್ಷಿಣ ಕನ್ನಡ ಜಿಲ್ಲೆಗೆ ಬಹಳ ಸೂಕ್ತವಾಗಿದೆ ಎಂದು ಭಾಸ್ಕರ್ ರಾವ್ ಹೇಳಿದರು.
PublicNext
26/07/2022 10:28 pm