ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರಕಾರ ಅಗ್ನಿಪಥ್ ಯೋಜನೆಯ ಮೂಲಕ ಶಿಕ್ಷಣ ವಂಚಿತ ನಿರುದ್ಯೋಗಿ ಯುವಕರನ್ನು ವಂಚಿಸಲು ಸಂಚು ರೂಪಿಸಿದೆ. ಬಡವರ, ಶ್ರಮಿಕರ ಮನೆಯ ಮಕ್ಕಳ ಬದುಕಿನೊಂದಿಗೆ ಚೆಲ್ಲಾಟವಾಡುವ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಇದರ ಬಿಸಿ ತಟ್ಟಲಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಸಿಪಿಐಎಂ ನಗರದ ಕ್ಲಾಕ್ ಟವರ್ ಬಳಿ ನಡೆಸಿರುವ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಿಂಗಳಿಗೆ 24 ಸಾವಿರ ರೂ. ಸಂಬಳವಿರುವ ಕೇವಲ 4 ವರ್ಷಗಳ ಅಗ್ನಿಪಥ್‌ಗೆ ಸೇರಲು ಆಸಕ್ತರು ಪಿಯುಸಿಯಲ್ಲೇ ಶಿಕ್ಷಣ ತೊರೆಯಬೇಕಾಗುತ್ತದೆ. ಯುವಜನತಡಗೆ ಶಿಕ್ಷಣ, ಉದ್ಯೋಗ ಒದಗಿಸಲಾಗದ ಬಿಜೆಪಿ ಶಾಸಕರು, ಮುಖಂಡರು ತಮ್ಮ ಕಚೇರಿಗಳಲ್ಲಿ ಅಗ್ನಿಪಥ್ ಯೋಜನೆಯ ನೋಂದಣಿ ಅಭಿಯಾನ ನಡೆಸಿ ದಾರಿ ತಪ್ಪಿಸುತ್ತಿದ್ದಾರೆ. ಮೊದಲು ಅವರು ತಮ್ಮ ಕುಟುಂಬದ ಯುವಕರ ಶಿಕ್ಷಣ ಸ್ಥಗಿತಗೊಳಿಸಿ ಅಗ್ನಿವೀರರನ್ನಾಗಿ ಮಾಡಲಿ. ಈ ಮೂಲಕ ಅಗ್ನಿಪಥ್ ಯೋಜನೆಯ ಲಾಭವನ್ನು, ದೇಶಪ್ರೇಮವನ್ನು ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ನಿರುದ್ಯೋಗದಿಂದ ತತ್ತರಿಸಿರುವ ಯುವಜನತೆಗೆ ಉದ್ಯೋಗ ಸೃಷ್ಟಿಸುವ ಬದಲು ಮೋದಿ ಸರಕಾರ ಮತ್ತೆ ನಿರುದ್ಯೋಗದ ಕೂಪದತ್ತ ತಳ್ಳತ್ತಿದೆ. ಸರಕಾರ ತನ್ನ ಅಡಿಯಲ್ಲಿರುವ 77 ಇಲಾಖೆಗಳಲ್ಲಿ ಕೇವಲ 34 ಇಲಾಖೆಗಳಲ್ಲಿ ಮಾತ್ರವೇ ನಿವೃತ್ತ ಸೈನಿಕರನ್ನು ಸೇರಿಸುತ್ತಿದೆ. 4 ವರ್ಷಗಳ ಬಳಿಕ ಅಗ್ನಿಪಥ್ ಸೈನಿಕರಿಗೆ ಬಿಜೆಪಿ ಕಚೇರಿಯಲ್ಲಿ ಕಾವಲುಗಾರ ಕೆಲಸ ನೀಡುವುದಾಗಿ ಬಿಜೆಪಿ ನಾಯಕೊಬ್ಬರು ಅವಮಾನಕಾರಿ ಹೇಳಿಕೆ ನೀಡಿದ್ದಾರೆ. 4 ವರ್ಷಗಳ ಬಳಿಕ ನಿವೃತ್ತ ಸೈನಿಕರು ಬಿಜೆಪಿ ಕಚೇರಿ ಕಾಯುವ ಬದಲು ಬಿಜೆಪಿ ಕಚೇರಿಯನ್ನೇ ಶಾಶ್ವತವಾಗಿ ಮುಚ್ಚಲಿದ್ದಾರೆ ಎಂದು ಹೇಳಿದರು.
Kshetra Samachara
11/07/2022 09:21 pm