ಬಂಟ್ವಾಳ: ನೇತ್ರಾವತಿ ನದಿಯಿಂದ ಉಳ್ಳಾಲ, ಕೋಟೆಕಾರಿಗೆ ಕುಡಿಯುವ ನೀರು ಪೂರೈಸುವ ಪೈಪ್ ಅಳವಡಿಕೆ ಕಾಮಗಾರಿ ಸಜಿಪಮುನ್ನೂರು ಗ್ರಾಮದಲ್ಲಿ ಆರಂಭಿಸಬೇಕಾದರೆ, ಮೊದಲು ಗ್ರಾಮಸ್ಥರ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಾಗೂ ಕಾನೂನು ಹೋರಾಟ ನಡೆಸಲಾಗುವುದು, ಕಾಮಗಾರಿ ಆರಂಭಿಸಲು ಅವಕಾಶ ನೀಡುವುದಿಲ್ಲ ಎಂದು ಎಸ್ ಡಿಪಿಐ ಸಜಿಪಮುನ್ನೂರು ಗ್ರಾಮ ಸಮಿತಿ ಎಚ್ಚರಿಸಿದೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ ಡಿಪಿಐ ಗ್ರಾಮ ಸಮಿತಿ ಅಧ್ಯಕ್ಷ ಹಂಝ ನಂದಾವರ ಮತ್ತು ಮುಖಂಡ ಮಲಿಕ್ ಕೊಳಕೆ, ಉಳ್ಳಾಲ ನಗರಸಭೆ ಮತ್ತು ಕೋಟೆಕಾರ್ ಪಟ್ಟಣ ಪಂ. ವ್ಯಾಪ್ತಿಗೆ ಕುಡಿಯುವ ನೀರು ಪೂರೈಕೆಗೆ 198 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದ್ದು, ಜಾಕ್ ವೆಲ್ ಸಜೀಪಮುನ್ನೂರಿನ ಆಲಾಡಿ ನೇತ್ರಾವತಿ ತಟದಲ್ಲಿದೆ. ಈ ಕಾಮಗಾರಿ ಆರಂಭದಲ್ಲಿ ಈ ಯೋಜನೆಯಲ್ಲಿ ಸಜಿಪಮುನ್ನೂರಿಗೂ ನೀರು ಕೊಡಬೇಕೆಂದು ಆಗ್ರಹಿಸಿ ಪ್ರತಿಭಟಿಸಿದ ಸಂದರ್ಭ ಅಧಿಕಾರಿಗಳು, ಜನಪ್ರತಿನಿಧಿಗಳು, ನೀರು ಪೂರೈಸುವ ಭರವಸೆ ನೀಡಿದ್ದರು.
ಆದರೆ, ಇದೀಗ ಅವಕಾಶವಿಲ್ಲ ಎನ್ನುತ್ತಿದ್ದಾರೆ. ನಮಗೆ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಿದ ಬಳಿಕವೇ ಮುಂದಿನ ಕೆಲಸ ಮಾಡಿರಿ ಎಂದರು. ಆಲಾಡಿ ಜಾಕ್ವೆಲ್ ನಿಂದ ಸುಭಾಷ್ ನಗರ ವರೆಗಿನ ಪೈಪ್ ಲೈನ್ ಕಾಮಗಾರಿ ಬಾಕಿ ಇದೆ. ಈ ಕಾಮಗಾರಿ ಆರಂಭಿಸಬೇಕಾದರೆ ಮುಡಿಪುವಿನಿಂದ ಸಜಿಪಮುನ್ನೂರುವರೆಗೆ ನೀರು ಕೊಡುವ ಪೈಪ್ ಮೊದಲು ಅಳವಡಿಸಬೇಕು ಅಥವಾ ಸಜಿಪಮುನ್ನೂರು ಗ್ರಾಮದಲ್ಲೇ ನೀರು ಶುದ್ಧೀಕರಣ ಘಟಕ ನಿರ್ಮಿಸಬೇಕು. ಇಲ್ಲದಿದ್ದರೆ ಗ್ರಾಮಸ್ಥರು ಸೇರಿ ತೀವ್ರ ಪ್ರತಿಭಟನೆ ನಡೆಸುತ್ತೇವೆ ಎಂದರು.
Kshetra Samachara
28/12/2021 12:28 pm