ಮುಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಸಿಹಿತ್ಲು ಮುಂಡಾ ಪ್ರದೇಶದಲ್ಲಿ ಸಮುದ್ರ ಕೊರೆತ ತಡೆಗಟ್ಟಲು ಸುಮಾರು 4.15 ಕೋಟಿ ವೆಚ್ಚದಲ್ಲಿ ದೀರ್ಘಕಾಲಿಕ ತಡೆಗೋಡೆ ನಿರ್ಮಾಣಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭ ಅವರು ಮಾತನಾಡಿ ಕಳೆದ ತೌಕ್ತೆ ಚಂಡಮಾರುತದಿಂದ ತೀವ್ರ ಕಡಲ್ಕೊರೆತ ಉಂಟಾಗಿ ಸಸಿಹಿತ್ಲು ಸಮುದ್ರ ತೀರ ಬದಿಯಲ್ಲಿ ವ್ಯಾಪಕ ಹಾನಿ ಸಂಭವಿಸಿದ್ದು ಜನರ ಬದುಕು ದುಸ್ತರವಾಗಿದೆ. ಆದ್ದರಿಂದ ಸರಕಾರ ಸಸಿಹಿತ್ಲು ಸಮುದ್ರತೀರದ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣದ ಕಾರ್ಯ ಆರಂಭಿಸಿದೆ.
ಸಸಿಹಿತ್ಲು ಸ್ಟರ್ಲಿಂಗ್ ಫುಡ್ಸ್ ಸಮುದ್ರತೀರ ಪ್ರದೇಶದಿಂದ ಮುಂಡಾ ಬೀಚ್ ವರೆಗೆ 19.75 ಕೋಟಿ (1.6 ಕಿಮೀ) ಪ್ರಸ್ತಾವನೆ ಸಲ್ಲಿಸಲಾಗಿದ್ದು ಮುಂದಿನ ದಿನಗಳಲ್ಲಿ ಹಂತಹಂತವಾಗಿ ಕಾಮಗಾರಿ ನಡೆಸಲಾಗುವುದು.
ಅಂತರಾಷ್ಟ್ರೀಯ ಖ್ಯಾತಿಯ ಸಸಿಹಿತ್ಲು ಸರ್ಫಿಂಗ್ ಬೀಚ್ ಅಭಿವೃದ್ಧಿಗೆ 10 ಕೋಟಿ ಮಂಜೂರಾಗಿದ್ದು ತಾಂತ್ರಿಕ ಅಡಚಣೆಯಿಂದ ತೊಂದರೆಯಾಗಿದೆ.
ಗಡಿಭಾಗದ ಉಡುಪಿ ಜಿಲ್ಲೆಯ ಹೆಜಮಾಡಿ ಜೆಟ್ಟಿ ನಿರ್ಮಾಣದ ಜೊತೆಗೆ ಸಸಿಹಿತ್ಲು ಮುಂಡಾ ಬೀಚ್ ಅಭಿವೃದ್ಧಿಪಡಿಸಲು ಸರ್ವ ಪ್ರಯತ್ನ ನಡೆಸಲಾಗುವುದು ಎಂದರು.
ಈ ಸಂದರ್ಭ ಹಳೆಯಂಗಡಿ ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ, ಸದಸ್ಯರಾದ ಸುಖೇಶ್ ಪಾವಂಜೆ, ವಿನೋದ್ ಕುಮಾರ್, ಮಾಜಿ ತಾಪಂ ಸದಸ್ಯ ಜೀವನ್ ಪ್ರಕಾಶ್, ಉದಯ ಸಸಿಹಿತ್ಲು,ಸಹಾಯಕ ಇಂಜಿನಿಯರ್ ಪ್ರವೀಣ್ , ಮಂಡಲಾಧ್ಯಕ್ಷ ಸುನೀಲ್ ಆಳ್ವ, ಪಿಸಿಎ ಬ್ಯಾಂಕ್ ನಿರ್ದೇಶಕ ಶ್ಯಾಮ್ ಪ್ರಸಾದ್, ಹರಿಪ್ರಸಾದ್, ಗುತ್ತಿಗೆದಾರ ಧೀರಜ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
15/10/2021 01:13 pm