ಸುಳ್ಯ: ಮಳೆಹಾನಿ ವೀಕ್ಷಣೆಗಾಗಿ ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಸಂಜೆ 4:30ಕ್ಕೆ ಸುಳ್ಯ ನಿರೀಕ್ಷಣಾ ಮಂದಿರಕ್ಕೆ ಭೇಟಿ ನೀಡಿದರು.
ಈ ಸಂದರ್ಭ ಸಿಎಂ, ಜಿಲ್ಲೆಯ ಸಚಿವರು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಸುಳ್ಯ ತಾಲೂಕಿನಲ್ಲಿ ಆದ ಮಳೆ ಹಾನಿ ಮತ್ತು ಭೂ ಕಂಪನದ ಬಗ್ಗೆ ಸಚಿವ ಎಸ್. ಅಂಗಾರ ಅವರು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು. ಈ ವೇಳೆ ನಾನಾ ಬೇಡಿಕೆಗಳ ಮನವಿಯನ್ನು ಸಿಎಂಗೆ ಸಲ್ಲಿಸಲಾಯಿತು.
ಸಿಎಂ ಅವರು ಕೊಡಗಿನ ಭೇಟಿ ಮುಗಿಸಿ, ಸುಳ್ಯ ಸಂಪಾಜೆಯಲ್ಲಿ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಸುಳ್ಯ ನಿರೀಕ್ಷಣಾ ಮಂದಿರಕ್ಕೆ ಆಗಮಿಸಿದ ಸಂದರ್ಭ ಹಲವು ಜನರು ಮನವಿ ಸಲ್ಲಿಸಲು ನೆರೆದಿದ್ದು, ಸಿಎಂ ತುರ್ತಾಗಿ ನಿರ್ಗಮಿಸಿರುವುದು ಅಸಮಾಧಾನಕ್ಕೆ ಕಾರಣವಾಯಿತು. ಇದರಿಂದ ಮಾಧ್ಯಮ ಪ್ರತಿನಿಧಿಗಳೂ ನಿರಾಶೆ ಪಡುವಂತಾಯಿತು.
ಈ ಬಗ್ಗೆ ಸುಳ್ಯ ನಪಂ ವಿಪಕ್ಷ ಸದಸ್ಯ ವೆಂಕಪ್ಪ ಗೌಡ ಮಾತನಾಡಿ, ಮುಖ್ಯಮಂತ್ರಿಗಳ ಭೇಟಿ ಬಗ್ಗೆ ಜನರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಆ ನಿರೀಕ್ಷೆ ಹುಸಿಯಾಗಿದೆ. ಜನರ ಸಮಸ್ಯೆ ಆಲಿಸಲು ಸಿಎಂಗೆ ಸಮಯದ ಕೊರತೆ ಇದ್ದರೆ ವೈಮಾನಿಕ ಸಮೀಕ್ಷೆ ಮಾಡಬಹುದಿತ್ತು ಎಂದರು.
ಸಚಿವರಾದ ಎಸ್.ಅಂಗಾರ, ವಿ.ಸುನಿಲ್ ಕುಮಾರ್, ಆರ್.ಅಶೋಕ್, ಸಿ.ಸಿ.ಪಾಟೀಲ್ , ಸಂಸದ ನಳಿನ್ ಕಟೀಲ್ , ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ , ಜಿಪಂ ಸಿಇಒ ಡಾ.ಕುಮಾರ್ , ಎಸ್‌ಪಿ ಋಷಿಕೇಶ್ ಭಗವಾನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
12/07/2022 10:52 pm