ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೈಗಾರಿಕೆಗಳಲ್ಲಿರುವ ಸ್ಥಳೀಯ ವಿರೋಧಿ ನೀತಿಗಳಿಗೆ ಎಮ್ಆರ್ ಪಿಎಲ್ ನಾಯಕತ್ವ ನೀಡುತ್ತಿದೆ. ಈ ಕಂಪೆನಿ ತನ್ನ ತಪ್ಪುಗಳನ್ನು ಸರಿಪಡಿಸದಿದ್ದಲ್ಲಿ ಎಮ್ಆರ್ ಪಿಎಲ್ ಅನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕು ಎಂದು ಡಿವೈಎಫ್ಐ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನಗರದ ಕೂಳೂರು- ಜೋಕಟ್ಟೆ ಎಸ್ಇಝಡ್ ಸಂಪರ್ಕದ ಎಮ್ಆರ್ ಪಿಎಲ್ ಕಂಪೆನಿಯ ಸುಪರ್ದಿಯಲ್ಲಿರುವ ಕಾರಿಡಾರ್ ರಸ್ತೆಯ ಅವ್ಯವಸ್ಥೆಯನ್ನು ಸರಿಪಡಿಸಲು ಒತ್ತಾಯಿಸಿ ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ ಹಮ್ಮಿಕೊಂಡಿದ್ದ ರಸ್ತೆ ತಡೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಉದ್ಯೋಗದ ಭರವಸೆ ನೀಡಿ ತುಳುನಾಡಿನ ಅಪಾರ ಪ್ರಮಾಣದ ಭೂಮಿಯನ್ನು ಕಬಳಿಸಿರುವ ಬೃಹತ್ ಕೈಗಾರಿಕೆಗಳು ಪರಿಸರವನ್ನು ಎಗ್ಗಿಲ್ಲದೆ ನಾಶಗೊಳಿಸಿದೆ. ಇಲ್ಲಿನ ನೆಲ - ಜಲವನ್ನು ವಿಷಮಯಗೊಳಿಸಿದ್ದು ಮಾತ್ರವಲ್ಲದೆ ಕಂಪೆನಿಯ ಸುತ್ತಲಿನ ರಸ್ತೆ, ಚರಂಡಿಗಳನ್ನು ಬಳಸಲು ಯೋಗ್ಯವಿಲ್ಲದಂತೆ ಮಾಡಿ ಬಿಟ್ಟಿವೆ ಎಂದರು.
ಕೂಳೂರು, ಎಸ್ಇಝಡ್ ರಸ್ತೆ ಈಗ ಎಮ್ಆರ್ ಪಿಎಲ್ ಅಧೀನದಲ್ಲಿದೆ. ಎಸ್ಇಝಡ್, ಅನಘ, ರುಚಿಗೋಲ್ಡ್, ಅದಾನಿ, ವಿಲ್ಮಾ ಸಹಿತ ಹಲವು ಕೈಗಾರಿಕೆಗಳು ಈ ರಸ್ತೆಯನ್ನು ಬಳಸುತ್ತಿವೆ. ಆದರೆ ರಸ್ತೆ ಸಂಪೂರ್ಣ ಹೊಂಡ - ಗುಂಡಿಗಳಿಂದ ತುಂಬಿದ್ದರೂ ಕಂಪೆನಿಗಳಾಗಲಿ, ಜಿಲ್ಲಾಡಳಿತವಾಗಲಿ ದುರಸ್ತಿ ಮಾಡುತ್ತಿಲ್ಲ. ಇಲ್ಲಿಯ ಚರಂಡಿಗಳನ್ನು ಕಂಪೆನಿಗಳು ಅಕ್ರಮಿಸಿ ಮಣ್ಣು ತುಂಬಿಸಿದ್ದರೂ ಕೇಳುವವರಿಲ್ಲ. ಪರಿಣಾಮ ಕಂಪೆನಿಗಳ ಮಲಿನ ನೀರು ನಿಂತು ರೋಗರೋಜಿನಗಳು ವ್ಯಾಪಕವಾಗಿ ಹರಡುತ್ತಿದೆ. ದ್ವಿಚಕ್ರ ವಾಹನ ಸವಾರರು ರಸ್ತೆ ಹೊಂಡಕ್ಕೆ ಬಿದ್ದು ಕೈಕಾಲು ಮುರಿಸಿಕೊಳ್ಳುತ್ತಿದ್ದಾರೆ. ಹೊಂಡ ಗುಂಡಿ ಮುಚ್ಚಲು ಜಿಲ್ಲಾಡಳಿತ ತಕ್ಷಣ ಸರಿಯಾದ ಕ್ರಮ ಕೈಗೊಳ್ಳದಿದ್ದಲ್ಲಿ ಸ್ಥಳೀಯ ಕಂಪೆನಿಗಳಿಗೆ ಘೆರಾವ್ ಮಾಡುವುದಾಗಿ ಮುನೀರ್ ಕಾಟಿಪಳ್ಳ ಎಚ್ಚರಿಸಿದರು.
Kshetra Samachara
20/06/2022 02:19 pm