ವಿಶೇಷ ವರದಿ: ರಹೀಂ ಉಜಿರೆ
ಬೈಂದೂರು: ಇದು ಸುತ್ತಲೂ ಕಾಡನ್ನು ಆವರಿಸಿರುವ ಊರು.ಇಲ್ಲಿಯ ಜನ ಶ್ರಮ ಜೀವಿಗಳು.ಈ ಕೃಷಿ ಪ್ರಧಾನ ಊರಿನ ಮೇಲೆ ಈಗ ಜನಪ್ರತಿನಿಧಿಗಳ ಕಣ್ಣು ಬಿದ್ದಿದೆ! ಇಷ್ಟಕ್ಕೂ ಏನಿಲ್ಲಿಯ ಸಮಸ್ಯೆ? ಈ ಸ್ಟೋರಿ ನೋಡಿ....
ಹಸಿರು ಹೊದ್ದ ಪ್ರಕೃತಿಯ ರಮಣೀಯ ಪ್ರದೇಶದ ಈ ದೃಶ್ಯ, ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿದೆ. ಮೂರು ವರ್ಷಗಳ ಹಿಂದೆ ತಮ್ಮಬೇಳೆ ಬೇಯಿಸಿಕೊಳ್ಳುವ ಸಲುವಾಗಿ, ಸ್ಥಳೀಯ ರಾಜಕಾಣಿಗಳು ಬೈಂದೂರು ತಾಲೂಕಿನ ಮೂರು ಗ್ರಾಮ ಪಂಚಾಯತ್ ಗಳನ್ನು ಸೇರಿಸಿ ಒಂದು ಪಟ್ಟಣ ಪಂಚಾಯತ್ ಮಾಡಿದ್ದಾರೆ. ಇದರಲ್ಲಿ ತಗ್ಗರ್ಸೆ ಗ್ರಾಮ ಕೂಡ ಸೇರಿದ್ದು ಈ ಗ್ರಾಮ ಗುಡ್ಡಗಾಡು ಪ್ರದೇಶಗಳಿಂದ ಕೂಡಿದೆ. ಈ ಭಾಗದ ಮೂಡಣಗದ್ದೆ, ಹಾಲಂಬೇರು, ಚಂದಣ, ಗಂಗಾನಾಡು ಇಂತಹ ದಟ್ಟ ಅರಣ್ಯ ಪ್ರದೇಶವನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಸೇರಿಸಿ ಇಲ್ಲಿಯ ಗ್ರಾಮಸ್ಥರನ್ನು ಮೂಲಭೂತ ಸೌಕರ್ಯಗಳಿಂದ ವಂಚಿತರಾಗುವಂತೆ ಮಾಡಲಾಗಿದೆ. ಪಟ್ಟಣ ಪ್ರದೇಶಗಳನ್ನು ಸೇರಿಸಿ ಪಟ್ಟಣ ಪಂಚಾಯತ್ ಮಾಡುವ ಬದಲು, ಬಹುತೇಕ ಗ್ರಾಮೀಣ ಪ್ರದೇಶಗಳನ್ನು ಸೇರಿಸಿಕೊಳ್ಳುವ ಮೂಲಕ ಬಡಕುಟುಂಬಗಳು ಕಣ್ಣೀರು ಹಾಕುವಂತೆ ಮಾಡಿದ್ದಾರೆ.ಈ ಪಟ್ಟಣ ಪಂಚಾಯತ್ ಮಾಡಿದ್ದರ ಹಿಂದೆ ರಾಜಕೀಯ ಲಾಭ ಗಳಿಸುವ ಉದ್ದೇಶ ಇದೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಬಗ್ಗೆ ರೈತ ಸಂಘಟನೆ ಪ್ರತಿಭಟನೆ ನಡೆಸಿ ಮನವಿ ನೀಡಿದ್ರೂ ಶಾಸಕ ಸುಕುಮಾರ್ ಶೆಟ್ಟಿ ಕ್ಯಾರೇ ಎನ್ನುತ್ತಿಲ್ಲ.
ಮುಂಜಾನೆಯಿಂದ ಇಲ್ಲಿ ಕಾಡು ಪ್ರಾಣಿಗಳ ಕಾಟವಿದ್ದು, ಸಂಜೆ ವೇಳೆ ವಿದ್ಯುತ್ ದೀಪಗಳಿಲ್ಲದೆ ರಸ್ತೆಯಲ್ಲಿ ತಿರುಗಾಡುವ ವಾಹನ ಸವಾರರಿಗೆ ತೊಂದರೆ ಅನುಭವಿಸುವಂತಾಗಿದೆ. ಕಳೆದೆರಡು ವರ್ಷಗಳಿಂದ ಕೋವಿಡ್ ಸಂಕಷ್ಟ ಕಾಲದಲ್ಲಿ ವಿದ್ಯಾರ್ಥಿಗಳು ನೆಟ್ವರ್ಕ್ ಸಮಸ್ಯೆಯಿಂದ ಕಷ್ಟಪಟ್ಟ ಊರು ಇದಾಗಿದೆ. ಅದೆಷ್ಟೋ ಕುಟುಂಬಗಳ ಮನೆ ಸರಕಾರಿ ಭೂಮಿಯಲ್ಲಿದೆ. ಇದೀಗ ಗ್ರಾಮಗಳನ್ನು ಸೇರಿಸಿ ಪಟ್ಟಣ ಪಂಚಾಯತ್ ಮಾಡಿದ್ದರಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.ಈ ಗ್ರಾಮವನ್ನು ಪಟ್ಟಣ ಪಂಚಾಯತ್ ನಿಂದ ಕೈ ಬಿಡುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
ಒಟ್ಟಾರೆ ಪಟ್ಟಣ ಪಂಚಾಯತ್ ಮಾಡುವಾಗ ಇಂತಹ ಬಡ ರೈತ ಕುಟುಂಬದವರ ಅಭಿಪ್ರಾಯ ಪಡೆಯದೇ ಜನಪ್ರತಿನಿಧಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಅವೈಜ್ಞಾನಿಕ ತೀರ್ಮಾನ ಕೈಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸ್ಥಳೀಯ ಶಾಸಕರು ಈ ಬಗ್ಗೆ ಗಮನ ಹರಿಸಿ ಬಡ ಕುಟುಂಬಗಳ ನೆರವಿಗೆ ಬರಬೇಕಿದೆ.
Kshetra Samachara
19/01/2022 09:03 am