ಬಜಪೆ :ಎಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಸುಲ ಪದವಿನಲ್ಲಿ ಅಕ್ರಮ ಗಣಿಗಾರಿಕೆಯು ಕಳೆದ ಹಲವು ವರ್ಷಗಳಿಂದ ಎಗ್ಗಿಲ್ಲದೆ ನಡೆಯುತ್ತಿರುವ ಬಗ್ಗೆ ಎಕ್ಕಾರು ಗ್ರಾಮಸ್ಥರು ತೀವ್ರ ಆಕ್ರೋಶಗೊಂಡ ಘಟನೆ 2021-22ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ನಡೆದಿದೆ. ಇಲ್ಲಿ ಬೇರೆ ಬೇರೆ ಊರುಗಳಿಂದ ಬಂದು ಗಣಿಗಾರಿಕೆಯನ್ನು ನಡೆಸುತ್ತಿದ್ದಾರೆ. ಅಕ್ರಮ ಗಣಿಗಾರಿಕೆಯಿಂದಾಗಿ ಕೆಲ ಸಂಪರ್ಕ ಕಲ್ಪಿಸುವಂತಹ ರಸ್ತೆಗಳು ಕೂಡ ಮಾಯವಾಗಿದೆ.ಅಕ್ರಮ ಗಣಿಗಾರಿಕೆಯಿಂದ ಎಕ್ಕಾರು ಗ್ರಾಮ ಪಂಚಾಯತ್ ಕೂಡಾ ದೇಣಿಗೆ ಸ್ವೀಕರಿಸುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೆಲವೊಂದು ಕಡೆಗಳಲ್ಲಿ ಗಣಿಗಾರಿಕೆಯನ್ನು ನಡೆಸಿ ದೊಡ್ಡ ಗಾತ್ರಗಳ ಗುಂಡಿಗಳನ್ನು ಮುಚ್ಚದೇ ಮಳೆಗಾಲದ ಸಂದರ್ಭದಲ್ಲಿ ಮಳೆ ನೀರು ನಿಂತು ಅಪಾಯವನ್ನು ಆಹ್ವಾನಿಸುತ್ತಿದೆ. ಇಂತಹ ಹಲವು ಸಮಸ್ಯೆಗಳಿಂದ ಮುಕ್ತಿ ಸಿಗಬೇಕು ಎಂದು ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಗ್ರಾಮ ಸಭೆಯು ಆರಂಭವಾಗುತ್ತಿದ್ದಂತೆ ಗಣೆ ಇಲಾಖೆಯ ಅಧಿಕಾರಿಗಳು ಬಾರದೆ ಇದ್ದುದರಿಂದ ಗ್ರಾಮಸ್ಥರು ಗ್ರಾಮ ಸಭೆಯನ್ನು ನಡೆಸಬಾರದು ಎಂದು ಪಟ್ಟುಹಿಡಿದರು.
ನಂತರ ಸಭೆಗೆ ಆಗಮಿಸಿದ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದು ಕೊಂಡಿದ್ದಲ್ಲದೆ ಕೋರೆ ದಾಳಿ ನಡೆಸಿ ಪ್ರಕರಣ ದಾಖಲಾಗಿದೆಯೇ, ಕೇವಲ ಸೊತ್ತುಗಳನ್ನು ಮಾತ್ರ ವಶವಾಗಿದೆಯಾ ಹಾಗೂ ಲೀಸ್ ಪಡೆದವರ ವಿವರ ಕೊಡಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಅಲ್ಲದೆ ಈ ಬಗ್ಗೆ ವಿಶೇಷ ಸಭೆಯನ್ನು ಕರೆಯಬೇಕು ಎಂದು ಗ್ರಾಮಸ್ಥರು ಒತಾಯಿಸಿದ್ದಾರೆ.ನಂತರ ಸಭೆಯಲ್ಲಿ ಆ.13 ರಂದು ವಿಶೇಷ ಗ್ರಾಮ ಸಭೆ ನಡೆಸಲಾಗುವುದು ಎಂಬುದನ್ನು ನಿರ್ಣಯಿಸಲಾಯಿತು.
ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿಗಳನ್ನು ನೀಡಿದರು.ಸಭೆಯಲ್ಲಿ ಎಕ್ಕಾರು ಗ್ರಾ.ಪಂ ಅಧ್ಯಕ್ಷೆ ಸುರೇಖಾ ರೈ, ಗ್ರಾ.ಪಂ ಉಪಾಧ್ಯಕ್ಷ ಮಾಧವ,ಕಾರ್ಯದರ್ಶಿ ಕಮಲಾಕ್ಷ, ಪಿಡಿಓ ದೀಪಿಕಾ ಎ,ಗ್ರಾ.ಪಂ ಸದಸ್ಯರುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
01/10/2021 09:39 am