ಕಾಪು: ಕಾಪು ಪ್ರವಾಸಿ ಬಂಗ್ಲೆ ಆವರಣದ ಸುಮಾರು 4 ಎಕರೆ ಜಮೀನನ್ನು ಸರ್ಕಾರಿ ಸಮು ಚ್ಚಯವಾಗಿ ಮಾರ್ಪಾಡಿಸಿ ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿಸಲಾಗುವುದು ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ತಿಳಿಸಿದರು.
ಅವರು ಕಾಪುವಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಕುರಿತಂತೆ ಅಧಿಕಾರಿಗಳೊಂದಿಗೆ ಇಂದು ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್ ಕಚೇರಿ ಸಹಿತ 30 ಇಲಾಖೆಗಳು ಕಾರ್ಯಾಚರಿಸಲಿವೆ. ಕರ್ನಾಟಕ ಗೃಹ ಮಂಡಳಿ ಮೂಲಕ ನಿರ್ಮಾಣವಾಗುವ ಯೋಜನೆಗೆ ಪ್ರಾಥಮಿಕ ಅನುದಾನ ಬಿಡುಗಡೆಗಾಗಿ ಆರ್ಥಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಿಗೂ ಮನವಿ ಮಾಡಲಾಗಿದೆ. ಶೀಘ್ರ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದರು.
ಮಿನಿ ವಿಧಾನಸೌಧದಲ್ಲಿ ತಾಲೂಕು ಮ್ಯಾಜಿಸ್ಟ್ರೇಟ್ ಕಚೇರಿ, ತಾಲೂಕು ನ್ಯಾಯಾಲಯ ಒಳಗೊಂಡು ನೀಲಿ ನಕಾಶೆ ಸಿದ್ಧವಾಗಿದೆ. ಬಂಗ್ಲೆ ಆವರಣದಲ್ಲಿರುವ ವಸತಿಗೃಹ ತೆರವಿಗೆ ಸೂಚನೆ ನೀಡಲಾಗಿದೆ. ನೂತನ ತಾಪಂ ಕಚೇರಿಯೂ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಮೆಸ್ಕಾಂ ಕಚೇರಿ ನಿರ್ಮಾಣಕ್ಕೂ ಜಿಲ್ಲಾಧಿಕಾರಿ ಜಮೀನು ಮಂಜೂರು ಮಾಡಿದ್ದಾರೆ. ಹಳೆ ಪ್ರವಾಸಿ ಬಂಗ್ಲೆ ತೆರವು ಮಾಡಿ ಅಭಿವೃದ್ಧಿಗೊಳಿಸುವ ಯೋಜನೆಯೂ ಇದೆ ಎಂದರು.
Kshetra Samachara
10/10/2020 10:13 am