ಬಂಟ್ವಾಳ: ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನ ಬಯಸಿ ನಾನು ಸೇರ್ಪಡೆ ಆಗಿಲ್ಲ, ಕಾಂಗ್ರೆಸ್ ನಲ್ಲಿ ನನ್ನ ಆತ್ಮಗೌರವಕ್ಕೆ ಧಕ್ಕೆ ತರುವ ಕೆಲಸವಾಯಿತು. ಸತತವಾಗಿ ನನ್ನನ್ನು ತುಳಿಯುವ ಕೆಲಸ ನಡೆಯಿತು, ಹಿರಿಯರ ನನ್ನನ್ನು ಕಡೆಗಣಿಸಿದಾಗ ವಿಧಿ ಇಲ್ಲದೆ ಪಕ್ಷ ತ್ಯಜಿಸಿ ಹೊರಬರಬೇಕಾಯಿತು ಎಂದು ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಮಾಧವ ಮಾವೆ ಹೇಳಿದರು.
ಬಂಟ್ವಾಳ ಬಿಜೆಪಿ ಪಕ್ಷ ಕಚೇರಿಯಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ತನ್ನನ್ನು ನಡೆಸಿಕೊಂಡ ಕುರಿತು ಸುದೀರ್ಘ ವಿವರಣೆ ನೀಡಿದರು. ಇತ್ತೀಚೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಅವರು ತಾನು ಸ್ಥಾನಾಕಾಂಕ್ಷಿ ಎಂದೂ ಮೂಲ ಕಾಂಗ್ರೆಸಿಗನಲ್ಲವೆಂದೂ ಹೇಳಿರುವುದನ್ನು ಉಲ್ಲೇಖಿಸಿದ ಅವರು, ತಾನು ರಮಾನಾಥ ರೈ ಅವರು ನಾಗರಾಜ ಶೆಟ್ಟಿಯವರೊಂದಿಗೆ ಚುನಾವಣೆಯಲ್ಲಿ ಸೋತ ಕಾಲದಿಂದಲೂ ಜತೆಗಿದ್ದೆ.
ಬೆಂಗಳೂರಿನಲ್ಲಿಯೂ ಕಾಂಗ್ರೆಸ್ ಪಕ್ಷದ ಜವಾಬ್ದಾರಿಯುತ ಹುದ್ದೆಯಲ್ಲಿದ್ದೆ. ರೈ ಅವರು ಅನೇಕ ಜವಾಬ್ದಾರಿಗಳನ್ನು ಇಲ್ಲಿಯೂ ತನಗೆ ನೀಡಿದ್ದರು. ಅವರ ಗೆಲುವಿಗಾಗಿ ಶಕ್ತಿಮೀರಿ ಶ್ರಮಿಸಿದ್ದೆ. ನಾನು ವಲಸಿಗನಲ್ಲ, ಪಕ್ಷ ದ್ರೋಹದ ಕೆಲಸ ಮಾಡಿರಲಿಲ್ಲ. ಆದರೆ, ತುಳಿತದಿಂದ ಬೇಸತ್ತು ಪಕ್ಷ ಬಿಟ್ಟಿದ್ದೇನೆ. ನನ್ನ ಖಾಸಗಿ ಉದ್ಯಮ ವ್ಯವಹಾರಕ್ಕೆ ಸಂಬಂಧಿಸಿ ರಮಾನಾಥ ರೈ ಯವರಿಂದ ಸಹಾಯ ಪಡೆದಿಲ್ಲ. ಸಮಾಜ ಸೇವೆ ಮಾಡಲೆಂದು ಬಂದಿದ್ದೇನೆ. ನನ್ನನ್ನು ಹಿಂದುಳಿದ ವರ್ಗದ ಜಿಲ್ಲಾ ಅಧ್ಯಕ್ಷ ಮಾಡುತ್ತೇನೆಂದು ತಿಳಿಸಿದ ರೈ, ವರ್ಷ ಕಳೆದರೂ ಅಧ್ಯಕ್ಷರಾಗಿ ಮಾಡಿರಲಿಲ್ಲ. ಖಾದರ್ ಮುತುವರ್ಜಿಯಲ್ಲಿ ಅವಕಾಶ ಸಿಕ್ಕಿತ್ತಾದರೂ, ರೈ ಯವರಿಂದಾಗಿ ಅಧಿಕಾರ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಆ ಬಳಿಕದಿಂದ ನಾನು ಪಕ್ಷದ ಸಕ್ರಿಯ ರಾಜಕಾರಣದಿಂದ ದೂರವಿದ್ದೆ. ವೈಯಕ್ತಿಕ ಗೌರವಕ್ಕೆ ಧಕ್ಕೆ ಬಂದಾಗ ಮನೆ ಮಕ್ಕಳು ಹೊರ ಬಂದ ಹಾಗೆ, ನಾನು ಕಾಂಗ್ರೆಸ್ ಪಕ್ಷದ ಮನೆಯಿಂದ ಹೊರಬಂದಿದ್ದೇನೆ. ಶಾಸಕ ರಾಜೇಶ್ ನಾಯ್ಕ್ ಅವರ ರಾಜ ಧರ್ಮ ದ ಆಡಳಿತಕ್ಕೆ ಬೆಂಬಲ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ ಎಂದರು. ಮುಂದಿನ ಚುನಾವಣೆಯಲ್ಲಿ ರಾಜೇಶ್ ನಾಯ್ಕ್ ಅವರನ್ನು 25-30 ಸಾವಿರ ಮತಗಳ ಅಂತರದಿಂದ ಗೆಲ್ಲಿಸಲು ಹಗಲು ರಾತ್ರಿ ದುಡಿಯುವುದೇ ನನ್ನ ಅಜೆಂಡಾ ಎಂದ ಅವರು, ಭಾರತೀಯ ಜನತಾ ಪಾರ್ಟಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸಮ್ಮುಖದಲ್ಲಿ ಸೇರ್ಪಡೆಗೊಂಡಿದ್ದೇನೆ ಎಂದು ಹೇಳಿದರು.
ಇದೇ ವೇಳೆ ಶಾಸಕ ರಾಜೇಶ್ ನಾಯ್ಕ್ ಉಪಸ್ಥಿತಿಯಲ್ಲಿ ಹಿರಿಯ ಕಾಂಗ್ರೆಸಿಗ ಬಾಲಕೃಷ್ಣ ಶೆಟ್ಟಿ ಬಿಜೆಪಿಗೆ ಸೇರ್ಪಡೆಗೊಂಡರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ , ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ಡೊಂಬಯ್ಯ ಅರಳ, ಕೇಶವ ದೈಪಲ, ರೊನಾಲ್ಡ್ ಡಿಸೋಜ, ವಸಂತ ಅಣ್ಣಳಿಕೆ, ಸುದರ್ಶನ್ ಬಜ, ಡಿ.ಕೆ.ಹಂಝ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
24/12/2020 08:28 pm