ಮಂಗಳೂರು: ಕೆಐಎಡಿಬಿ ಅಧಿಕಾರಿಯೊಬ್ಬರ ಹೆಸರನ್ನ ಸ್ವಾಮೀಜಿಯೋರ್ವರು 'ನಾಯಿ' ಹೆಸರಿಗೆ ಹೋಲಿಸಿ ನಿಂದಿಸಿದ ಘಟನೆ ನಡೆದಿದ್ದು, ಈ ವೀಡಿಯೋ ಇದೀಗ ಜಾಲತಾಣದಾದ್ಯಂತ ವೈರಲ್ ಆಗಿದೆ. ಕಳೆದ ವಾರ ಮಂಗಳೂರು ಭೇಟಿ ಸಂದರ್ಭ ಚಿಕ್ಕಮಗಳೂರಿನ ಕಾಳಿಕಾ ಮಠಾಧೀಶ ಶ್ರೀರಿಷಿ ಕುಮಾರ ಸ್ವಾಮೀಜಿ ಅವರು ಬಜ್ಪೆಯ ಕೆಂಜಾರು ಬಳಿ ಇರುವ ಕಪಿಲ ಗೋ ಪಾರ್ಕ್ ಗೆ ಭೇಟಿ ನೀಡಿದ್ದರು. ಈ ಸಂದರ್ಭ ಅಧಿಕಾರಿಯ ಅನುಪಸ್ಥಿತಿಯಲ್ಲಿ ಬಿನೋಯ್ ಹೆಸರಿನ ಅಧಿಕಾರಿಯನ್ನ 'ಬಿ+ನಾಯಿ' ಎಂದು ನಿಂದಿಸಿದ್ದಾರೆ.
ಭಾರತೀಯ ಕೋಸ್ಟ್ ಗಾರ್ಡ್ ಗೆ ಬೇಕಾಗಿ ಭೂಮಿ ಸ್ವಾಧೀನ ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಗೋಶಾಲೆಯನ್ನೂ ಕೆಐಎಡಿಬಿ ಸ್ವಾಧೀನಕ್ಕೆ ಮುಂದಾಗಿದೆ. ಪ್ರಕಾಶ್ ಶೆಟ್ಟಿ ಎಂಬವರಿಗೆ ಸೇರಿದ ಗೋಶಾಲೆ ಅವರಿಗೆ ಸೇರಿದ 33 ಸೆಂಟ್ಸ್ ಜಾಗದಲ್ಲಿದ್ದು, ಸುಮಾರು 300 ಅಧಿಕ ಹಸು ಕರುಗಳಿವೆ. ಆದರೆ ಏಕಾಏಕಿ ಗೋಶಾಲೆ ತೆರವಿಗೆ ಮುಂದಾಗಿರುವ ಅಧಿಕಾರಿಗಳು ಗೋಶಾಲೆಗೆ ಬೆಂಕಿ ಹಚ್ಚುವ, ಒಡೆದು ನಾಶ ಮಾಡುವ ಬೆದರಿಕೆ ಹಾಕುತ್ತಿರುವುದಾಗಿ ಈ ಹಿಂದೆಯೇ ಗೋಶಾಲೆ ಮಾಲಿಕ ಪ್ರಕಾಶ್ ಶೆಟ್ಟಿ ಆರೋಪಿಸಿದ್ದರು.
ಈ ನಿಟ್ಟಿನಲ್ಲಿ ಪ್ರಕಾಶ್ ಶೆಟ್ಟಿ ಅವರು ಗೋಶಾಲೆ ಉಳಿಸಿಕೊಳ್ಳೋದಕ್ಕೆ ಕಾನೂನು ವ್ಯಾಪ್ತಿಯಲ್ಲಿ ಹೋರಾಟವನ್ನೂ ಸಂಘಟಿಸಿದ್ದಾರೆ. ಈ ಮಧ್ಯೆ ಶ್ರೀಕಾಳಿಕಾ ಮಠಾಧೀಶರು ಪ್ರಕಾಶ್ ಶೆಟ್ಟಿಯವರಿಗೆ ಬೇಷರತ್ ಬೆಂಬಲ ಸೂಚಿಸಿ, ಗೋಶಾಲೆಗೆ ಭೇಟಿ ನೀಡಿದ್ದಾರೆ. ಈ ಸಂದರ್ಭ ಪ್ರತಿಕ್ರಿಯಿಸಿದ್ದ ಕಾಳಿಕಾ ಮಠಾಧೀಶರು, ಅಧಿಕಾರಿಯ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದಾರೆ. ಓರ್ವ ಸನ್ಯಾಸಿಯಾಗಿ ಈ ರೀತಿಯ ಪದ ಬಳಕೆ ಮಾಡಿರೋದು ಎಷ್ಟು ಸರಿ ಅನ್ನೋದರ ಬಗ್ಗೆ ಈ ವಿಚಾರ ಚರ್ಚೆಗೂ ಕಾರಣವಾಗಿದೆ.
Kshetra Samachara
29/11/2020 09:21 pm