ಮಂಗಳೂರು: 2019-20 ನೇ ಆರ್ಥಿಕ ಸಾಲಿನ ಅಂತ್ಯದಲ್ಲಿನ ಕೋವಿಡ್-19 ಲಾಕ್‌ಡೌನ್ ನಡುವೆಯೂ ನಮ್ಮ ಸಂಸ್ಥೆ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ಕಾಲಘಟ್ಟದಲ್ಲಿ ಕ್ಯಾಂಪ್ಕೋ ಸಾಧನೆ ವಿವರಿಸಿದ್ದಾರೆ.
2019-20ನೇ ಆರ್ಥಿಕ ಸಾಲಿನ ಅಂತ್ಯದಲ್ಲಿನ 1848 ಕೋಟಿ ರೂ.ನ ಬೃಹತ್ ವಹಿವಾಟನ್ನು ಸಂಸ್ಥೆ ದಾಖಲಿಸಿದ್ದು, ಕೊರೊನಾ ಬಿಕ್ಕಟ್ಟು ದೇಶವನ್ನು ಆವರಿಸಿಕೊಳ್ಳದಿರುತ್ತಿದ್ದರೆ ಹಿಂದಿನ ಸಾಲಿನ ದಾಖಲೆಯ ವಹಿವಾಟನ್ನು ಮೀರುತ್ತಿತ್ತು ಎಂಬುದು ನಿಸ್ಸಂಶಯ. ಈ ಸಹಕಾರಿ ಸಂಸ್ಥೆಯು 1,430.43 ಕೋಟಿ ರೂ. ಮೌಲ್ಯದ 48,294.93 ಮೆ.ಟನ್ ಅಡಿಕೆ ಖರೀದಿಸಿದೆ.
ಚಾಕಲೇಟ್ ಮಾರಾಟ ಮತ್ತು ಇತರ ಗ್ರಾಹಕರಿಗೆ ಎಲ್ಲ ರೀತಿಯ ಚಾಕಲೇಟ್ ಪರಿಚಯಿಸುವ ಮತ್ತು ಸುಲಭವಾಗಿಸುವ ದೃಷ್ಟಿಯಿಂದ ಬೆಂಗಳೂರು ಮತ್ತು ಪುತ್ತೂರಿನಲ್ಲಿ ವಿಶೇಷ ಚಾಕಲೇಟ್ ಘಟಕಗಳು ಕಾರ್ಯಪ್ರವೃತ್ತವಾಗಿವೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸ್ಪೈಸ್ ಟೋಪಿ ಎಂಬ ಹೊಸ ಚಾಕಲೇಟ್ ಉತ್ಪನ್ನ ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಉತ್ತಮ ಬೇಡಿಕೆ ಪಡೆದಿದೆ. ಅಲ್ಲದೆ, ನೇರವಾಗಿ ಕೃಷಿಕನ ಮನೆಗೆ ಹೋಗಿ ಅಡಿಕೆ ಖರೀದಿಸುವ 'ಕ್ಯಾಂಪ್ಕೋ ಆನ್ ವೀಲ್'ಗೆ ಜನವರಿಯಿಂದ ಅಧಿಕೃತ ಚಾಲನೆ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ವ್ಯವಸ್ಥಾಪನಾ ನಿರ್ದೇಶಕ ಎಚ್.ಎಮ್. ಕೃಷ್ಣ ಕುಮಾರ್ ಉಪಸ್ಥಿತರಿದ್ದರು.
Kshetra Samachara
26/11/2020 08:23 pm