ಸುಬ್ರಹ್ಮಣ್ಯ: ಸರಕಾರ ಕಸ್ತೂರಿ ರಂಗನ್ ವರದಿ ಮತ್ತೊಮ್ಮೆ ಕೈಗೆತ್ತಿಕೊಂಡು ಸ್ಥಳೀಯರನ್ನು ಆತಂಕಕ್ಕೀಡು ಮಾಡುವಂತೆ ಮಾಡಿದ ಸರಕಾರದ ನೀತಿ ವಿರೋಧಿಸಿ ಮುಂದಿನ ಹೋರಾಟಗಳ ಬಗ್ಗೆ ತೀರ್ಮಾನಿಸಲು ಅ. 23 ರಂದು ಬಿಳಿನೆಲೆಯಲ್ಲಿ ಸಮಾಲೋಚನೆ ಸಭೆ ನಡೆಯಲಿದೆ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಹೇಳಿದರು.
ಸುಬ್ರಹ್ಮಣ್ಯದ ವಿವಿಐಪಿ ವಸತಿ ಗೃಹದಲ್ಲಿ ಕಿಶೋರ್ ಶಿರಾಡಿ, ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ಪರಿಸರ ವಿರೋಧಿ ನೀತಿ ವಿರುದ್ಧ ಹಿಂದಿನಿಂದಲೇ ಸುಬ್ರಹ್ಮಣ್ಯ ಕೇಂದ್ರೀಕರಿಸಿಕೊಂಡು ಹೋರಾಟಗಳನ್ನು ಮಾಡುತ್ತಾ ಬಂದಿದ್ದೇವೆ. ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿ ಇದೀಗ ಸರಕಾರ, ಕೇಂದ್ರಕ್ಕೆ ವರದಿ ನೀಡುವಂತೆ ಗಡುವು ನೀಡಿದೆ. ಯಾವುದೇ ಹೆಚ್ಚಿನ ಕಾಲಾವಕಾಶ ಹಾಗೂ ಪೂರ್ವ ಮಾಹಿತಿ ನೀಡದೆ ಆದೇಶ ಹೊರಡಿಸಲಾಗಿದೆ ಎಂದು ಆರೋಪಿಸಿದರು.
ಈ ಹಿಂದೆ ಕಸ್ತೂರಿ ರಂಗನ್ ವರದಿ ಜಾರಿ ಕುರಿತು ದ.ಕ. ಜಿಲ್ಲೆಯ ಬಾಧಿತ 48 ಗ್ರಾಮಗಳಲ್ಲಿ ಗ್ರಾಮಸ್ಥರನ್ನು ಸೇರಿಸಿಕೊಂಡು ವಿಶೇಷ ಗ್ರಾಮಸಭೆ ನಡೆಸಲಾಗಿತ್ತು. ಇದರಲ್ಲಿ ಎಲ್ಲಾ ಕಡೆಯೂ ವರದಿ ಜಾರಿಗೆ ವಿರೋಧ ವ್ಯಕ್ತವಾಗಿತ್ತಲ್ಲದೆ, ಅನುಷ್ಠಾನವಾಗದಂತೆ ನಿರ್ಣಯ ಕೈಗೊಂಡರೂ ಇದೀಗ ಸರಕಾರ ಕಸ್ತೂರಿ ರಂಗನ್ ವರದಿ ಜಾರಿಗೆ ಮುಂದಾಗಿರುವುದು, ವರದಿ ಜಾರಿ ವಿರೋಧಿಸಿ ತಾಪಂ, ಜಿಪಂ, ಶಾಸಕರ ನಿರ್ಣಯ ಎಲ್ಲವೂ ಇದೆ. ಅಲ್ಲದೆ, ಅಂದು ಮಾಡಿದ ವಿಶೇಷ ಗ್ರಾಮಸಭೆಗೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದ ಕಿಶೋರ್, ವಿಶೇಷ ಗ್ರಾಮಸಭೆಯ ಉದ್ದೇಶ ಏನೆಂದು ಪ್ರಶ್ನಿಸಿದರು.
ಈಗಾಗಲೇ ಕೃಷಿಕರು ವಿವಿಧ ಕಾರಣಗಳಿಂದ ಕೃಷಿಯಲ್ಲಿ ನಷ್ಟ ಅನುಭವಿಸುತ್ತಿದ್ದಾರೆ. ಇದೀಗ ಕಸ್ತೂರಿ ರಂಗನ್ ವರದಿ ಕೃಷಿಕರನ್ನೂ ಇನ್ನೂ ಆತಂಕಕ್ಕೀಡು ಮಾಡಿದೆ. ಪರಿಸರ ಸಂರಕ್ಷಣೆ ಹೆಸರಿನಲ್ಲಿ ಮಾಡುವ ಈ ರೀತಿಯ ಕೆಲಸಗಳಿಂದ ದ.ಕ. ಜಿಲ್ಲೆಯ ಮೂರು ತಾಲೂಕುಗಳ ಕೃಷಿ ಭೂಮಿ ಕೊಂಡುಕೊಳ್ಳಲು ಯಾರೂ ಮುಂದಾಗುತ್ತಿಲ್ಲ ಎಂದರು.
ನಗರದಲ್ಲಿದ್ದ ಯುವಕರು ಕೊರೊನಾ ಕಾರಣದಿಂದ ಊರಿಗೆ ಬಂದು ಕೃಷಿಯಲ್ಲಿ ತೊಡಗಿಕೊಂಡಿರುವ ಈ ಸಮಯದಲ್ಲಿ ಸರಕಾರದ ಈ ನೀತಿ ಯುವಜನತೆಯನ್ನು ಕೂಡ ಭಯಗೊಳಿಸಿದೆ. ಕೋವಿ ಲೈಸೆನ್ಸ್ ರದ್ದು ಮಾಡಿದ್ದರಿಂದ ಕೃಷಿ ರಕ್ಷಣೆ ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ಮಲೆನಾಡು ಹಿತರಕ್ಷಣಾ ವೇದಿಕೆಯ ವಿಜಯ ಶಿರಾಡಿ, ರವೀಂದ್ರ ಕುಮಾರ್ ರುದ್ರಪಾದ, ಭರತ್ ಕನ್ನಡ್ಕ, ಜಯಪ್ರಕಾಶ್ ಕೂಜುಗೋಡು ಉಪಸ್ಥಿತರಿದ್ದರು.
Kshetra Samachara
18/10/2020 07:11 pm