ಮೂಡುಬಿದಿರೆ: ವಿದ್ಯಾರ್ಥಿಯು ಎಲ್ಲಾ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ವಿದ್ಯಾರ್ಥಿ ಜೀವನ ಪರಿಪೂರ್ಣವಾಗುತ್ತದೆ ಎಂದು ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ಅವರು ಆಳ್ವಾಸ್ ಕಾಲೇಜಿನ ವೃತ್ತಿಪರ ವಾಣಿಜ್ಯ ವಿಭಾಗದ ವತಿಯಿಂದ ಚಾಣಕ್ಯ-2022 ಫೆಸ್ಟ್ ಭಾಗವಾಗಿ ಆಯೋಜಿಸಿದ `ಸ್ವಾದಿಷ್ಟ’ ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಕಲಿಕೆಯ ಸಮಯದಲ್ಲಿ ಕೆಲವೊಂದು ವಿಷಯದಲ್ಲಿ ಸಫಲರಾದರೆ ಇನ್ನು ಕೆಲವೊಂದು ವಿಷಯದಲ್ಲಿ ವಿಫಲರಾಗುತ್ತಾರೆ. ಇದರಿಂದ ಭವಿಷ್ಯದಲ್ಲಿ ಒಂದೊಳ್ಳೆ ಪಾಠವನ್ನು ಕಲಿಯಬಹುದು. ಕಾಲಹರಣಕ್ಕಾಗಿ ಯಾವುದೇ ಕಾರ್ಯದಲ್ಲಿ ತೊಡಗಿಸಿಕೊಳ್ಳಬಾರದು, ಜವಾಬ್ದಾರಿಯುತವಾಗಿ ಮಾಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಫುಡ್ ಅಂಡ್ ನ್ಯೂಟ್ರಿಷಿಯನ್ ವಿಭಾಗದ ಮುಖ್ಯಸ್ಥೆ ಡಾ. ಅರ್ಚನಾ ಪ್ರಭಾತ್ ಮಾತನಾಡಿ, ಫುಡ್ ಎಂದರೆ ಎಲ್ಲರಿಗೂ ಇಷ್ಟ, ಆಹಾರ ತಯಾರಿಸುವಲ್ಲಿನ ಆಸಕ್ತಿ ಅದನ್ನು ಸವಿಯುವಲ್ಲಿಯೂ ಇರುತ್ತದೆ. ಈ ಆಹಾರ ಮೇಳವು ಶಿಕ್ಷಣದ ಜೊತೆಗೆ ವ್ಯಾವಹಾರಿಕ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಡೀನ್ ಪ್ರಶಾಂತ್ ಎಂ ಡಿ, ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕ ಅಶೋಕ್ ಕೆ. ಜಿ., ಆಹಾರ ಮೇಳದ ಸಂಯೋಜಕ ಅನಂತಶಯನ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ರಕ್ಷಣ್ಯ ನಿರೂಪಿಸಿ,ನಿಶಿಲ್ ಸ್ವಾಗತಿಸಿ, ಬ್ರಯನ್ ಪಿಂಟೋ ವಂದಿಸಿದರು.
ಆಹಾರ ಮೇಳವನ್ನು `ಚಾಣಕ್ಯ-2022’ ಫೆಸ್ಟ್ ಭಾಗವಾಗಿ ಆಯೋಜಿಸಲಾಗಿತ್ತು.ಆಹಾರಮೇಳದಲ್ಲಿ 10ಕ್ಕೂ ಅಧಿಕ ಫುಡ್ ಸ್ಟಾಲ್‌ಗಳಲ್ಲಿ ವಿದ್ಯಾರ್ಥಿಗಳೇ ತಯಾರಿಸಿದ ವಿವಿಧ ಬಗೆಯ ಚುರುಮುರಿ, ಪಾನಿ ಪುರಿ, ಮಸಾಲ್ ಪುರಿ, ಮಸಾಲಾ ಬಟರ್ ಮಿಲ್ಕ್, ಕಾರ್ನ್, ಗೋಬಿ ಪಾವ್, ಮೊಹಿತೊ, ಸ್ವೀಟ್ ಬೀಡಾ, ಹೀಗೆ ಅನೇಕ ರೀತಿಯ ತಿನಿಸುಗಳು ಆಹಾರ ಪ್ರಿಯರನ್ನು ಸೆಳೆಯುತ್ತಿದ್ದವು.
Kshetra Samachara
24/08/2022 08:03 pm