ಸುಳ್ಯ: ಬಿಜೆಪಿ ಅಧಿಕಾರದಲ್ಲಿ ಇದ್ದರೂ ಅಡಿಕೆ ಹಳದಿ ರೋಗಕ್ಕೆ ಪರಿಹಾರ ಕಾಣದೇ ಇದ್ದುದು ಹಾಗೂ ಟಯರ್ ಫ್ಯಾಕ್ಟರಿ ಅನುಷ್ಠಾನ ಆಗದೇ ಇದ್ದುದು ಅತಿ ದೊಡ್ಡ ವೈಫಲ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ದೇವರಗುಂಡದ ತಮ್ಮ ಮನೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭ 25 ಕೋಟಿ ರೂ.ನ ವಿಶೇಷ ಅನುದಾನ ಇರಿಸಿದ್ದರೂ ಸಮರ್ಪಕವಾಗಿ ಅನುಷ್ಠಾನ ಆಗಿಲ್ಲ. ಅಡಿಕೆಗೆ ಕೆಜಿಗೆ 30 ರೂ. ಆಗಿದ್ದ ಸಂದರ್ಭ ಸಂಪಾಜೆಯಿಂದ ಮಂಗಳೂರುವರೆಗೆ ಪಾದಯಾತ್ರೆ ಸಹಿತ ಅಡಿಕೆ ಕೃಷಿಕರ ಪರವಾಗಿ ದೊಡ್ಡ ಹೋರಾಟವನ್ನೇ ನಡೆಸಿದ್ದೇವೆ. ಈ ಪರಿಣಾಮ ಅಡಿಕೆ ಬೆಲೆ ಏರಿಕೆ, ಬೆಂಬಲ ಬೆಲೆ ದೊರೆತಿತ್ತು.
ಅಡಿಕೆ ಬೆಲೆ ಏರಿಸಲು ಕೇಂದ್ರ ಸರಕಾರ ಹಲವು ಯೋಜನೆ ರೂಪಿಸಿದೆ. ಆಮದು ನೀತಿಗೆ ಹೊಸ ಭಾಷ್ಯ ಬರೆದಿದೆ. ಇದರಿಂದ ಅಡಿಕೆ ಬೆಲೆ ಏರಿದೆ, ಮಾರುಕಟ್ಟೆ ಸ್ಥಿರತೆ ಉಂಟಾಗಿದೆ ಎಂದರು.
ಈ ಭಾಗದ ರಬ್ಬರ್‌ಗೆ ಉತ್ತಮ ಧಾರಣೆ, ಮೌಲ್ಯ ದೊರೆಯಬೇಕೆಂದು ತಾನು ಸಿಎಂ ಆಗಿದ್ದ ಸಂದರ್ಭ ಸುಳ್ಯದಲ್ಲಿ ಟಯರ್ ಫ್ಯಾಕ್ಟರಿ ಸ್ಥಾಪಿಸಬೇಕೆಂದು ಯೋಜನೆ ರೂಪಿಸಿದ್ದೆ. ಟಯರ್ ಕಂಪೆನಿ, ಕೈಗಾರಿಕೆ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಿದ್ದೆ. ಅಜ್ಜಾವರ ಮತ್ತು ತೊಡಿಕಾನದಲ್ಲಿ ಸ್ಥಳ ಗುರುತಿಸುವಿಕೆ ನಡೆದಿತ್ತು. ಆದರೆ, ತನ್ನ 11 ತಿಂಗಳ ಅವಧಿ ಮುಗಿದ ಬಳಿಕ ಅದಕ್ಕೆ ವೇಗ ಸಿಗದೆ ನನೆಗುದಿಗೆ ಬಿದ್ದು ಹಿನ್ನಡೆಯಾಯಿತು ಎಂದು ಸದಾನಂದ ಗೌಡ ಬೇಸರಿಸಿದರು.
PublicNext
18/09/2022 03:40 pm