ಸುಳ್ಯ: ಕೊಡಗು ಜಿಲ್ಲೆಯಲ್ಲಿ ಮಳೆಯ ತೀವ್ರತೆ ಕಡಿಮೆಯಿದ್ದರೂ, ಅಲ್ಲಲ್ಲಿ ಭೂಕುಸಿತ, ಮರಗಳು ಧರೆಗುರುಳಿದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಬುಧವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಭಾಗಮಂಡಲ-ಕರಿಕೆ ರಸ್ತೆಯಲ್ಲಿ ಅಲ್ಲಲ್ಲಿ ಭೂ ಕುಸಿತ ಉಂಟಾಗಿದ್ದು, ಅನೇಕ ಕಡೆ ಮರಗಳು ರಸ್ತೆಗೆ ಅಡ್ಡಲಾಗಿ ಉರುಳಿರುವುದರಿಂದ ಈ ಮಾರ್ಗದಲ್ಲಿ ದಿನಪೂರ್ತಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಸಂಜೆಯ ವೇಳೆಗೆ ರಸ್ತೆ ವಾಹನ ಸಂಚಾರಕ್ಕೆ ತೆರವುಗೊಂಡಿದೆ ಎಂದು ತಿಳಿದು ಬಂದಿದೆ. ಮಡಿಕೇರಿಯಿಂದ ಭಾಗಮಂಡಲ-ಕರಿಕೆ-ಪಾಣತ್ತೂರು ಮಾರ್ಗವಾಗಿ ಕೇರಳದ ಕಾಂಞಂಗಾಡ್, ಕಾಸರಗೋಡುವಿಗೆ ತೆರಳುವವರಿಗೆ ಈ ಮಾರ್ಗ ಸಮೀಪವಾಗಿದೆ. ಆದರೆ ಭಾಗಮಂಡಲ ಕರಿಕೆ ರಸ್ತೆಯ ಕೊಟ್ಟಮಲೆ ಹಾಗೂ ಬಾಚಿಮಲೆಯಲ್ಲಿ ಕುಸಿತ ಉಂಟಾಗಿ ಭಾರೀ ಪ್ರಮಾಣದ ಮಣ್ಣು ರಸ್ತೆಗೆ ಬಿದ್ದಿರುವುದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮಳೆಯ ನಡುವೆಯೂ ಎರಡು ಜೆಸಿಬಿ ಯಂತ್ರಗಳನ್ನು ಬಳಸಿ ಮಣ್ಣು ತೆರವು ಕಾರ್ಯಾಚರಣೆ ನಡೆಸಿ ರಸ್ತೆ ತೆರವು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕೆಲವು ದಿನಗಳ ಹಿಂದೆ ರಸ್ತೆಯಲ್ಲಿ ಮಣ್ಣು ಕುಸಿತ ಆಗಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಅಧಿಕವಾಗಿದ್ದು ಜಿಲ್ಲೆಯ ಸಂಪಾಜೆ ಹಾಗೂ ಚೆಂಬು ಮತ್ತು ಕರಿಕೆ ಭಾಗದಲ್ಲಿ ವ್ಯಾಪಕ ಮಳೆಯಿಂದಾಗಿ ಅಲ್ಲಲ್ಲಿ ಹಾನಿಯಾಗಿದೆ.
ಮಳೆಗೆ ಚೆಂಬು ಗ್ರಾಮ ಬಳಿಯ ಮಾರ್ಪಡ್ಕ ಸೇತುವೆ ಕೊಚ್ಚಿ ಹೋಗಿದ್ದು ಊರುಬೈಲು ಸಂಪರ್ಕ ಕಡಿತಗೊಂಡಿದೆ. ಸಂಪಾಜೆಯಿಂದ ಮಾರ್ಪಡ್ಕ ಮೂಲಕ ಊರುಬೈಲಿಗೆ ಸಂಪರ್ಕ ಕಲ್ಪಿಸುವ ಮಾರ್ಪಡ್ಕ ಸೇತುವೆಯು ಭಾರೀ ಮಳೆಯಿಂದಾಗಿ ಕುಸಿದಿದ್ದು, ಊರುಬೈಲಿನ ಸುಮಾರು ಇನ್ನೂರಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತಗೊಂಡಿದೆ. ವ್ಯಾಪಕ ಮಳೆ ಆಗುತ್ತಿರುವುದರಿಂದ ಜಿಲ್ಲೆಯಲ್ಲಿ ಅಲ್ಲಲ್ಲಿ ಹಾನಿ ಸಂಭವಿಸಿದೆ.
ಸ್ಲಗ್ :
Kshetra Samachara
04/08/2022 09:47 pm