ಸುಳ್ಯ: ಪದೇ ಪದೆ ಭೂ ಕಂಪನ ಹಿನ್ನೆಲೆಯಲ್ಲಿ ಸಂಪಾಜೆ ಗ್ರಾಮದ ಗೂನಡ್ಕ, ಕಲ್ಲುಗುಂಡಿ ಭಾಗದ
ಬಿರುಕು ಬಿಟ್ಟ ಮನೆಯಲ್ಲಿ ವಾಸಿಸಲು ಜನರು ಭಯಪಡುತ್ತಿದ್ದಾರೆ. ಇದರಿಂದ ಮನೆ ಬಿಟ್ಟು ಬೇರೆಡೆ ವಾಸಿಸಲು ಆರಂಭಿಸಿದ್ದಾರೆ.
ಗೂನಡ್ಕ ದರ್ಖಾಸಿನಲ್ಲಿರುವ ಗ್ರಾಪಂ ಸದಸ್ಯ ಅಬೂಸಾಲಿ ಮನೆಯಲ್ಲಿ ಎರಡು ದಿನ ಉಂಟಾದ ಭೂ ಕಂಪನದಲ್ಲಿ ಬಿರುಕು ಕಾಣಿಸಿದ್ದು, ನಿನ್ನೆ ಮನೆಯಲ್ಲಿ ವಾಸ ಮಾಡಿಲ್ಲ. ಈಗ ಮನೆಯಲ್ಲಿ ವಾಸಿಸುವುದು ಸುರಕ್ಷಿತವಲ್ಲ ಎಂಬ ಕಾರಣದಿಂದ ನಿನ್ನೆ ರಾತ್ರಿ ನಾವು ಯಾರೂ ಮನೆಯಲ್ಲಿ ವಾಸ ಮಾಡಿಲ್ಲ ಎಂದು ಅಬೂಸಾಲಿ ತಿಳಿಸಿದ್ದಾರೆ.
ಮನೆಯವರನ್ನು ಸಂಬಂಧಿಕರ ಮನೆಗೆ ಕಳಿಸಿದ್ದೇವೆ. ತಾನು ಕೂಡ ಅಲ್ಲಿ ವಾಸ ಮಾಡಿಲ್ಲ. ಮಳೆಗಾಲ ಮುಗಿಯುವ ತನಕ ವಾಸಕ್ಕೆ ಪರ್ಯಾಯ ವ್ಯವಸ್ಥೆ ಹುಡುಕುವುದು ಅನಿವಾರ್ಯ ಎಂದರು ಅಬೂಸಾಲಿ. ಜೂ.25 ರಂದು ಸಂಭವಿಸಿದ ಭೂಕಂಪನದಲ್ಲಿ ಅಬೂಸಾಲಿ ಮನೆಯಲ್ಲಿ ಬಿರುಕು ಮೂಡಿತ್ತು.
ಜೂ.28ರಂದು ತೀವ್ರತೆ ಹೆಚ್ಚಿದ್ದ ಭೂ ಕಂಪನದಲ್ಲಿ ಇನ್ನಷ್ಟು ಬಿರುಕು ಕಾಣಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಮನೆಯಿಂದ ಬೇರೆಡೆಗೆ ಸ್ಥಳಾಂತರಗೊಳ್ಳಲು ನಿರ್ಧರಿಸಿದ್ದಾರೆ. ಗೂನಡ್ಕ, ಸಂಪಾಜೆ ಭಾಗದ ಹಲವು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಜನರು ಭಯಭೀತಿಯಿಂದಲೇ ಬದುಕುವಂತಾಗಿದೆ.
Kshetra Samachara
29/06/2022 09:43 pm