ವರದಿ: ರಹೀಂ ಉಜಿರೆ
ಮಲ್ಪೆ: ಮಲ್ಪೆಯಲ್ಲಿ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಪ್ರವಾಸಿಗರು ಕಡಲಿಗೆ ಇಳಿಯದಂತೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.ನಿನ್ನೆಯಿಂದ
ಬಂಗಾಳಕೊಲ್ಲಿಯಲ್ಲಿ ಅಸಾನಿ ಚಂಡಮಾರುತ ಅಬ್ಬರ ಜೋರಾದ ಕಾರಣ ಅರಬ್ಬಿ ಸಮುದ್ರದಲ್ಲಿ ತೀವ್ರ ಗಾಳಿ ಜೊತೆಗೆ ದೊಡ್ಡ ಅಲೆಗಳ ಅಬ್ಬರ ಜೋರಾಗಿದೆ.ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಡಲ ತೀರದ ಜಲಕ್ರೀಡೆಗಳನ್ನು ಬಂದ್ ಮಾಡಲಾಗಿದೆ.
ಮಲ್ಪೆ ಬೀಚ್ ಮಾತ್ರವಲ್ಲದೆ ಸೈಂಟ್ ಮೇರಿಸ್ ದ್ವೀಪದ ಭೇಟಿಗೂ ಮುಂದಿನ ಆದೇಶದವರೆಗೆ ನಿರ್ಬಂಧ ಹೇರಲಾಗಿದೆ. ವಾರಾಂತ್ಯ ರಜೆ ಹಿನ್ನೆಲೆಯಲ್ಲಿ ಮಲ್ಪೆ ಬೀಚ್‌ನಲ್ಲಿ ನಿನ್ನೆ ಜನ ಸಾಗರವೇ ಹರಿದುಬಂದಿತ್ತು. ನಿನ್ನೆ ಸಮುದ್ರದಲ್ಲಿ ಆಡುತ್ತಿದ್ದಾಗ ನೀರು ಪಾಲಾಗುತ್ತಿದ್ದ ಮೂವರು ಪ್ರವಾಸಿಗರನ್ನು ಲೈಫ್ ಗಾರ್ಡ್ ತಂಡವು ರಕ್ಷಿಸಿತ್ತು. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಉಡುಪಿಯತ್ತ ಬರುತ್ತಿರುವುದರಿಂದ ಮಲ್ಪೆ ಬೀಚ್‌ನಲ್ಲಿ ಜನಸ್ತೋಮವೇ ನೆರೆದಿತ್ತು. ಬೀಚ್‌ನ ಪ್ರಮುಖ ಆಕರ್ಷಣೆಯಾಗಿರುವ ತೇಲುವ ಸೇತುವೆಯಲ್ಲಿ ನಡೆಯುವುದಕ್ಕೂ ಸಾಕಷ್ಟು ಮಂದಿ ಸ್ಥಳೀಯರು ಆಗಮಿಸಿದ್ದರು.ಆದರೆ ಚಂಡಮಾರುತದ ಪರಿಣಾಮ ತೇಲುವ ಸೇತುವೆಗೆ ಭಾರೀ ಹಾನಿ ಉಂಟಾಗಿದೆ.
ಸಮುದ್ರ ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಠಿಯಿಂದ ನಿನ್ನೆ ಸಂಜೆಯಿಂದಲೇ ಬೀಚ್‌ನಲ್ಲಿನ ವಾಟರ್ ಸ್ಪೋರ್ಟ್ಸ್ ಹಾಗೂ ತೇಲುವ ಸೇತುವೆ ಪ್ರವೇಶವನ್ನು ಸ್ಥಗಿತಗೊಳಿಸಲಾಗಿದೆ ಎಂದು ಲೈಫ್ ಗಾರ್ಡ್ ಮಧು ಹೇಳಿದ್ದಾರೆ.
ಒಟ್ಟಾರೆ ಚಂಡಮಾರುತದ ಹಾವಳಿ ಕಡಿಮೆಯಾಗುವ ತನಕ ಬೀಚ್ ಕಡೆ ಪ್ರವಾಸ ಹಮ್ಮಿಕೊಂಡವರು ಕಾರ್ಯಕ್ರಮ ರದ್ದುಗೊಳಿಸುವುದು ಉತ್ತಮ.
PublicNext
09/05/2022 04:50 pm