ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ತನ್ನನ್ನು ರಕ್ಷಿಸಿದವರಿಗೆ ಪ್ರಕೃತಿ ಎಂದೂ ಮೋಸ ಮಾಡೋಲ್ಲ ಎಂಬ ಮಾತಿದೆ. ಮರುಭೂಮಿಯಲ್ಲಿ ಓಯಸೀಸ್ ನಂತಿರುವ ಈ ನೀರಿನ ಸೆಲೆಯನ್ನು ನೋಡಿ ಎಲ್ಲರೂ ಅಚ್ಚರಿ ಪಡಬೇಕು.
ಶುಭ್ರ ಸ್ಪಟಿಕದಂತಹಾ ನೀರು, ಬಾಯಿಗಿಟ್ಟರೆ ಕಬ್ಬಿನ ಹಾಲು ಕುಡಿದಷ್ಟು ಖುಷಿ! ಕಡು ಬೇಸಗೆಯಲ್ಲಿ ಈ ನೀರು ನಿಜಕ್ಕೂ ಅಮೃತಸಮಾನ!
ಉಡುಪಿಯ ಮಣಿಪಾಲಕ್ಕೆ ಹೊಂದಿಕೊಂಡಿರುವ ಈ ಕೆರೆಯು ಬತ್ತಿದ್ದನ್ನು ಯಾರೂ ಕಂಡಿಲ್ಲ. ಉಡುಪಿ ಜಿಲ್ಲೆಯ ಕೀಳಿಂಜೆ ಎಂಬ ಗ್ರಾಮದಲ್ಲಿ ಈ ದೇವರ ಕೊಳ ಇದೆ. ಕೀಳಿಂಜೆಯಲ್ಲಿರುವ ಈ ಪುರಾತನ ದೇವಸ್ಥಾನದಲ್ಲಿ ಹರಿ ಮತ್ತು ಹರರ ಆರಾಧನೆ ನಡೆಯುತ್ತೆ. ಅದಕ್ಕೂ ಮುಖ್ಯವಾಗಿ ಮರ ಗಿಡಗಳು, ಹಸಿರು ರಾಶಿ, ಪ್ರಾಣಿ ಪಕ್ಷಿಗಳಿಗೆ ಈ ಭಾಗದಲ್ಲಿ ಯಾವುದೇ ಹಾನಿ ಮಾಡಿಲ್ಲ. ಉಡುಪಿ-ಮಣಿಪಾಲದಲ್ಲಿ ನೀರೆಲ್ಲಾ ಬತ್ತಿಹೋಗಿ ಬರಗಾಲ ಬಂದರೂ, ಪಕ್ಕದಲ್ಲೇ ಇರುವ ಕೀಳಿಂಜೆ ಕೆರೆಯಲ್ಲಿ ಮಾತ್ರ ನಿರಂತರ ನೀರು ಒಸರುತ್ತಿದೆ.
ಕೀಳಿಂಜೆಯ ಬೆಟ್ಟ ಪ್ರದೇಶದಲ್ಲಿ ಸಾಕಷ್ಟು ಮರಗಳು ಇನ್ನೂ ಹಸನಾಗಿದೆ. ಈ ಮರಗಳು ಹಿಡಿದಿಟ್ಟ ನೀರು ಸೆಖೆಗಾಲದಲ್ಲಿ ಅಂತರ್ಜಲವಾಗಿ ಚಿಮ್ಮುತ್ತಿದೆ. ಬೆಟ್ಟದಿಂದ ಪುಟ್ಟ ಕೊಳ್ಳಕ್ಕೆ ಹರಿದು, ಅಲ್ಲಿಂದ ಮುಂದೆ ನಾಗ ಸನ್ನಿಧಿಯಲ್ಲಿರುವ ಕೆರೆತುಂಬಿ, ಮುಂದೆ ಊರ ಜನರು ಬಳಸುವ ದೊಡ್ಡ ಕೆರೆಗೆ ಇಲ್ಲಿನ ನೀರು ಹರಿದುಹೋಗುತ್ತೆ. ಕಡುಬೇಸಗೆಯಲ್ಲೂ ಈ ತುಂಬಿದ ಕೊಳ ನೋಡುವುದು ಕಣ್ಣಿಗೆ ಹಬ್ಬವೇ ಸರಿ. ಅಂತಯೇ ಈ ಕ್ಷೇತ್ರದ ಕಾರಣಿಕದ ಬಗೆಗೂ ಜನರಿಗೆ ವಿಶೇಷವಾದ ಶೃದ್ಧೆ ಇದೆ.
ಈ ನೀರು ಜನಬಳಕೆಗೆ ಉಪಯೋಗವಾಗಬೇಕು, ಸರ್ಕಾರ ಮನಸ್ಸು ಮಾಡಿದರೆ ಈ ಅಂತರ್ಜಲವನ್ನು ಸಂಗ್ರಹಿಸಿ ಜನರ ನೀರಿನ ಬರ ನೀಗಿಸಬಹುದು.ಈ ದೇವಸ್ಥಾನಕ್ಕೆ ಮಣಿಪಾಲ ಶ್ರೀಂಬ್ರ, ಹೊಸ ಸೇತುವೆ ಮೂಲಕವೂ ಬರಬಹುದು, ಕೊಳಲಗಿರಿ ಹಾವಂಜೆ ಕೀಳಂಜೆಯ ಮೂಲಕವೂ ಹರಿಹರ ಸನ್ನಿಧಿಯನ್ನು ಸಂಪರ್ಕಿಸಲು ಮೂರು ಕೋಟಿ 40 ಲಕ್ಷ ವೆಚ್ಚದಲ್ಲಿ ನೂತನ ರಿಂಗ್ ರಸ್ತೆ ರಚನೆಯಾಗಿದ್ದು, ಈ ರಸ್ತೆಯಲ್ಲಿ ಸಂಚರಿಸಿ ಈ ದೇವಸ್ಥಾನವನ್ನು ನೋಡಬಹುದು.ಒಟ್ಟಿನಲ್ಲಿ 365 ದಿನವೂ ನಿತ್ಯ ನೀರು ಹರಿಯುವುದು,, ಪ್ರಕೃತಿ ಪ್ರಿಯರಲ್ಲಿ ಸಂತಸ ಮೂಡಿಸಿದೆ.
Kshetra Samachara
06/05/2022 09:57 am