ವಿಟ್ಲ: ಪುಣಚ ಗ್ರಾಮ ಮತ್ತು ಪುತ್ತೂರು ತಾಲೂಕಿನ ಗಡಿಭಾಗದಲ್ಲಿರುವ ಚನಿಲ, ಅಂಬಟೆಮೂಲೆ, ಬೈಲುಪದವು, ಕೋಡಂದೂರು ಭಾಗದಲ್ಲಿ ಒಂಟಿ ಚಿರತೆ ಹಲವು ದಿನಗಳಿಂದ ಅಡ್ಡಾಡಿಕೊಂಡಿದ್ದು, ಸ್ಥಳೀಯರಲ್ಲಿ ಭಯ ಮೂಡಿಸಿದೆ.
ಅರಣ್ಯ ಇಲಾಖೆಯ ಗೇರು ಅಭಿವೃದ್ಧಿ ನಿಗಮದ ಗೇರುಬೀಜ ತೋಪು 30 ಎಕರೆಗಿಂತಲೂ ಅಧಿಕ ವಿಸ್ತೀರ್ಣದಲ್ಲಿ ಹರಡಿದ್ದು, ಇಲ್ಲಿ ಇತರ ಮರಗಳು, ಪೊದೆಗಂಟಿ, ಹುಲ್ಲು ಬೆಳೆದಿದ್ದು, ಜನ ಸಂಚಾರ ಕಡಿಮೆ ಇರುವ ಕಾರಣ ಹಂದಿ, ಮರಬೆಕ್ಕು, ಕೋತಿ ಇನ್ನಿತರ ಕಾಡುಪ್ರಾಣಿಗಳ ಆಶ್ರಯತಾಣವಾಗಿದೆ.
50 ವರ್ಷಗಳ ಹಿಂದೆ ಈ ಭಾಗದಲ್ಲಿ ಹತ್ತಾರು ಹುಲಿಗಳು, ಜಿಂಕೆ, ಕಾಡುಕೋಣ ಇತ್ಯಾದಿ ವನ್ಯಜೀವಿಗಳು ಇದ್ದ ಬಗ್ಗೆ ಹಿರಿಯರು ನೆನಪಿಸುತ್ತಾರೆ. ಹಗಲು ವೇಳೆಯೇ ದನಕರುಗಳ ದಾಳಿ ಮಾಡುತ್ತಿದ್ದ ಹುಲಿಗಳನ್ನು ಹಿಡಿಯಲು ಕಲ್ಲಿನ ಗೂಡು(ಪಂಜರ) ನಿರ್ಮಿಸಿದ್ದ 2 ಗೂಡುಗಳು ಈಗಲೂ ಇವೆ.
ಜ.1ರಂದು ಹಾಡಹಗಲೇ ಕೋಡಂದೂರು ಭಾಗದಲ್ಲಿ ಸೀತಾರಾಮ ನಾಯಕ ಎಂಬವರಿಗೆ ಚಿರತೆ ಕಾಣಸಿಕ್ಕಿತ್ತು. ಜ.2 ರಂದು ರಾತ್ರಿ 10ರ ವೇಳೆಗೆ ಬೈಕ್‌ನಲ್ಲಿ ಬರುತ್ತಿದ್ದ ನವೀನ್ ರೈ ಅವರಿಗೆ ಕಾಂಕ್ರೀಟ್ ರಸ್ತೆ ಬದಿ ಚಿರತೆ ಗೋಚರಿಸಿದೆ. ಇದೀಗ ಈ ಭಾಗದ ಜನರೆಲ್ಲ ಆತಂಕಕ್ಕೀಡಾಗಿದ್ದು, ಅರಣ್ಯ ಇಲಾಖೆ ಚಿರತೆಯನ್ನು ಹಿಡಿದು ರಕ್ಷಿತಾರಣ್ಯಕ್ಕೆ ಕೊಂಡೊಯ್ಯಬೇಕೆಂದು ಆಗ್ರಹಿಸುತ್ತಿದ್ದಾರೆ.
Kshetra Samachara
05/01/2022 11:21 am