ಹೆಬ್ರಿ: ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ವಿಫುಲ ಅವಕಾಶಗಳಿವೆ.ಆದರೂ ಜಿಲ್ಲೆಯಲ್ಲಿ ಪ್ರವಾಸಿ ಚಟುವಟಿಕೆಗಳು ಅಷ್ಟಾಗಿ ಅಭಿವೃದ್ಧಿಗೊಂಡಿಲ್ಲ. ಹಿನ್ನೀರಿನ ಲಾಭವನ್ನು ಅತ್ಯಂತ ಯಶಸ್ವಿಯಾಗಿ ಪ್ರವಾಸೋದ್ಯಮಕ್ಕೆ ಬಳಸಿಕೊಂಡಿರುವ ರಾಜ್ಯ ಕೇರಳ. ಜಿಲ್ಲೆಯ ಹಿನ್ನೀರಿನ ಪ್ರದೇಶಗಳನ್ನು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಹೊಸ ಪ್ರಯತ್ನ ಇಲ್ಲೂ ಪ್ರಾರಂಭಗೊಂಡಿದೆ.
ಜಿಲ್ಲೆಯ ಸಾಲಿಗ್ರಾಮ ಸಮೀಪದ ಸೀತಾ ನದಿಯ ಹಿನ್ನೀರಿನ ಕಾಂಡ್ಲಾವನದ ಮಧ್ಯದಲ್ಲಿ ಸಂಚರಿಸುವ ಕಯಾಕಿಂಗ್ ಸಾಹಸಯಾನ, ಪ್ರವಾಸಿಗರಿಗೆ ಹೊಸ ಅನುಭವ ನೀಡುತ್ತಿದೆ.
ಸ್ಥಳೀಯ ಯುವಕರಾದ ಮಿಥುನ್ ಕೋಡಿ ಮತ್ತು ಲೋಕೇಶ್ ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು ಸಾಲಿಗ್ರಾಮದ ಪಾರಂಪಳ್ಳಿ ಬ್ರಿಡ್ಜ್ ಬಳಿ ಸೀತಾನದಿಯ ಹಿನ್ನೀರಿನ ಕಾಂಡ್ಲಾ ವನದಲ್ಲಿ ಕಯಾಕಿಂಗ್ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಸಾಹಸ ಚಟುವಟಿಕೆ ಕೈಗೊಳ್ಳುವ ಪ್ರವಾಸಿಗರಿಗೆ ಸದ್ಯ ಇದು ಹಾಟ್ ಸ್ಪಾಟ್.
ಇಲ್ಲಿನ ತರಬೇತುದಾರರು ಕೇವಲ 5 ರಿಂದ 10 ನಿಮಿಷದಲ್ಲಿ ಕಯಾಕಿಂಗ್ ನಡೆಸುವ ಕೌಶಲ್ಯಗಳನ್ನು ಸಮರ್ಥವಾಗಿ ಕಲಿಯುವಂತೆ ನೀರಿನಲ್ಲಿಯೇ ಅಗತ್ಯ ತರಬೇತಿ ನೀಡಲಿದ್ದು ದೋಣಿಯೊಂದಿಗೆ ನೀರಿಗಳಿದ ಪ್ರವಾಸಿಗರೇ ಸ್ವತಃ ದೋಣಿಗಳನ್ನು ನಡೆಸಬಹುದು.
ಇಲ್ಲಿನ ಹಿನ್ನೀರಿನಲ್ಲಿ ಅಪಾಯಕಾರಿಯಾಗುವಷ್ಟು ಆಳ ಇಲ್ಲ. ಹೀಗಾಗಿ ಎಲ್ಲ ವಯೋಮಾನದವರೂ ಯಾವುದೇ ಭಯವಿಲ್ಲದೇ ಕಯಾಕಿಂಗ್ ಮಾಡಬಹುದಾಗಿದೆ. ಅಲ್ಲದೇ ಎಲ್ಲ ರೀತಿಯ ಸುರಕ್ಷಾ ಕ್ರಮಗಳು, ಲೈಫ್ ಜಾಕೆಟ್ ಗಳು ಹಾಗೂ ನುರಿತ ತರಬೇತುದಾರರು ಜೊತೆಯಲ್ಲಿಯೇ ಇರುವುದರಿಂದ ಭಯವನ್ನು ಮರೆತು ಸಂಪೂರ್ಣವಾಗಿ ಕುಟುಂಬ ಸಮೇತ ಸಾಹಸ ಚಟುವಟಿಕೆಯ ಅನುಭವವನ್ನು ಆನಂದಿಸಬಹುದು.
Kshetra Samachara
15/12/2021 07:30 pm