ಮಂಗಳೂರು: ಆಳಸಮುದ್ರ ಮೀನುಗಾರಿಕೆ ಬೋಟೊಂದಕ್ಕೆ ಬರೋಬ್ಬರಿ 1,200 ಕೆ.ಜಿ. ತೂಕದ 'ವೇಲ್' ಮೀನು ಸಿಕ್ಕಿದೆ. ಈ ಮೀನು ಸೆರೆ ಹಿಡಿಯುವುದು ಕಾನೂನು ಬಾಹಿರವಾಗಿರುವುದರಿಂದ ಅದನ್ನು ಮರಳಿ ಸಮುದ್ರಕ್ಕೆ ಬಿಡಲಾಯಿತು.
10 ದಿನಗಳ ಹಿಂದೆ ಆಳ ಸಮುದ್ರ ಮೀನುಗಾರಿಕೆಗೆಂದು ಮಂಗಳೂರಿನ 'ಸಾಗರ್' ಹೆಸರಿನ ಬೋಟ್ ತೆರಳಿ, ಮೀನುಗಾರಿಕೆ ನಡೆಸುತ್ತಿತ್ತು. ಈ ಸಂದರ್ಭ 3 ದಿನಗಳ ಹಿಂದೆ 50 ನಾಟಿಕಲ್ ಮೈಲ್ ದೂರದಲ್ಲಿ ಈ ಬೃಹತ್ ಮೀನು ಬಲೆಗೆ ಬಿದ್ದಿದೆ. ಬಲೆ ಮೇಲೆತ್ತುವಾಗ ಭಾರಿ ಭಾರವಿದ್ದ ಪರಿಣಾಮ ಬಹಳಷ್ಟು ಮೀನು ಬಿದ್ದಿರ ಬಹುದೆಂದು ಮೀನುಗಾರರು ಗ್ರಹಿಸಿದ್ದರು. ಆದರೆ, ಬಲೆಯನ್ನು ಸಂಪೂರ್ಣ ಮೇಲೆತ್ತಿದಾಗ ವೇಲ್ ಮತ್ಸ್ಯ 'ಪ್ರತ್ಯಕ್ಷ' ವಾಗಿದೆ.
ಅಳಿವಿನಂಚಿನಲ್ಲಿರುವ ಪ್ರಭೇದವಾಗಿರುವ ಹಿನ್ನೆಲೆಯಲ್ಲಿ 'ವೇಲ್' ಹಿಡಿಯುವುದನ್ನು ಕೇಂದ್ರ ಸರಕಾರ ನಿಷೇಧಿಸಿದೆ. ಹಾಗಾಗಿ ಮೀನುಗಾರರು ಬಲೆಯನ್ನು ತುಂಡರಿಸಿ ಮೀನನ್ನು ಮತ್ತೆ ಸಮುದ್ರಕ್ಕೆ ಜೀವಂತವಾಗಿ ಬಿಟ್ಟಿದ್ದಾರೆ. ಬಲೆಯನ್ನು ತುಂಡರಿಸಿದ ಪರಿಣಾಮ ಮೀನುಗಾರರಿಗೆ ಸುಮಾರು 1.50 ಲಕ್ಷ ರೂ. ನಷ್ಟವಾಗಿದೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದರೂ, ಮೀನುಗಾರರು ಪೂರ್ಣ ಮೀನುಗಾರಿಕೆ ನಡೆಸಿ ದಡಕ್ಕೆ ಬಂದ ಬಳಿಕವೇ ವೀಡಿಯೊ ಸಹಿತವಿರುವ ಈ ಸುದ್ದಿ ತಿಳಿಸಿದ್ದಾರೆ.
Kshetra Samachara
26/10/2021 12:03 pm