ಮುಲ್ಕಿ: ಮುಲ್ಕಿ ಹೋಬಳಿಯಲ್ಲಿ ಶನಿವಾರ ರಾತ್ರಿಯಿಂದಲೇ ಭಾರಿ ಮಳೆಯಾಗುತ್ತಿದ್ದು ತಗ್ಗುಪ್ರದೇಶಗಳು ಜಲಾವೃತವಾಗಿದೆ.
ಮುಲ್ಕಿ ಹೋಬಳಿಯ ಮಾನಂಪಾಡಿ ಮಟ್ಟು, ಪಕ್ಷಿಕೆರೆ , ಪಂಜ, ಕಿಲೆಂಜೂರು, ಕಟೀಲು ಪಂಚಾಯತ್ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ನೆರೆ ಪೀಡಿತ ತಗ್ಗು ಪ್ರದೇಶಗಳಲ್ಲಿ ದೋಣಿ ಮೂಲಕ ಜನರನ್ನು ರಕ್ಷಿಸಲಾಗುತ್ತಿದೆ.
ಭಾರಿ ಮಳೆಗೆ ಇತಿಹಾಸ ಪ್ರಸಿದ್ಧ ಬಪ್ಪನಾಡು ಹಾಗೂ ಶಿಮಂತೂರು ದೇವಸ್ಥಾನದ ಒಳಗೆ ಎರಡನೇ ಬಾರಿ ನೀರು ಬಂದಿದೆ. ಮುಲ್ಕಿಯ ಮಾನಂಪಾಡಿ, ಮಟ್ಟು ಪ್ರದೇಶದಲ್ಲಿ ಭಾರಿ ಮಳೆಗೆ ನೆರೆ ಉಂಟಾಗಿದ್ದು ಮನೆಯೊಳಗೆ ಸಿಲುಕಿಕೊಂಡ ವರನ್ನು ದೋಣಿ ಮೂಲಕ ರಕ್ಷಣೆ ಕಾರ್ಯ ನಡೆಯುತ್ತಿದೆ.
ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಮಾನಂಪಾಡಿ ಮತ್ತು ಸುತ್ತಮುತ್ತ ಪ್ರದೇಶದ ಕೆಲ ಮನೆಗಳಿಗೆ ನೀರು ಬಂದಿದ್ದು ಮನೆಯವರು ಪರದಾಡಬೇಕಾಯಿತು ಎಂದು ಸ್ಥಳೀಯ ಕೃಷಿಕ ಮಾಧವ ಕೆಂಪುಗುಡ್ಡೆ ಹೇಳಿದ್ದಾರೆ.
ಕೃಷಿ ಪ್ರಧಾನ ಮುಲ್ಕಿಯ ಮಟ್ಟು ವಿನಲ್ಲಿ ಭಾರಿ ಮಳೆಗೆ ನೆರೆ ಸೃಷ್ಟಿಯಾಗಿ ನೀರು ಬಂದಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಅತಿಕಾರಿ ಬೆಟ್ಟು ಗ್ರಾಮಕರಣಿಕ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಬಿರುಮಳೆಗೆ ಮುಲ್ಕಿ ಬಿಲ್ಲವ ಸಂಘದ ಬಳಿಯ ಹಳೆ ಸಿನಿಮಾ ಚಿತ್ರ ಮಂದಿರದ ಗೋಡೆ ಕುಸಿದಿದೆ. ಮುಲ್ಕಿ ಹೋಬಳಿಯಲ್ಲಿ ಶನಿವಾರ ರಾತ್ರಿಯಿಂದ ಭಾರಿ ಮಳೆಯಾಗುತ್ತಿದ್ದು ನಂದಿನಿ, ಶಾಂಭವಿ ನದಿಗಳು ಉಕ್ಕಿ ಹರಿಯುತ್ತಿದ್ದು, ಅಪಾಯ ಸಂಭವಿಸುವ ಮೊದಲೇ ರಕ್ಷಣಾ ಕಾರ್ಯ ಕ್ಕೆ ಸನ್ನದ್ಧವಾಗಿದೆ ಎಂದು ಮುಲ್ಕಿ ವಿಶೇಷ ತಹಸೀಲ್ದಾರ್ ಮಾಣಿಕ್ಯ ಎನ್. ತಿಳಿಸಿದ್ದಾರೆ.
Kshetra Samachara
20/09/2020 10:49 am