ಮುಲ್ಕಿ: ಮುಲ್ಕಿ ಹೋಬಳಿಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಭಾರಿ ಮಳೆಗೆ ಕೃಷಿ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ. ಕೃಷಿಯನ್ನೇ ನಂಬಿಕೊಂಡಿರುವ ರೈತರ ಬದುಕು ದುಸ್ತರವಾಗಿದೆ. ಮುಲ್ಕಿ ಹೋಬಳಿಯ ಅತಿಕಾರಿಬೆಟ್ಟು, ಪಕ್ಷಿಕೆರೆ, ಪಂಜ, ಕರ್ನಿರೆ, ಬಳ್ಕುಂಜೆ, ಹಳೆಯಂಗಡಿಯಲ್ಲಿ ಕೃಷಿ ಹಾನಿಯಾಗಿದ್ದು, ಭತ್ತದ ಪೈರು ತೇಲಾಡುತ್ತಿದೆ. ಮುಲ್ಕಿ ಹೋಬಳಿಯಲ್ಲಿ ಈಗಾಗಲೇ ಭತ್ತದ ಪೈರು ಬೆಳೆದು ಕಟಾವಿಗೆ ಸಿದ್ಧವಾಗಿದ್ದು, ಮಳೆಯಿಂದಾಗಿ ನೀರುಪಾಲಾಗಿದೆ. ಕೆಲವು ಕಡೆ ಕಟಾವ್ ಮಾಡಿದ ಪೈರು ಗದ್ದೆಯಲ್ಲಿದ್ದು, ಮೊಳಕೆ ಬಂದು ಹಾನಿಯಾಗುವ ಸಾಧ್ಯತೆ ಇದೆ. ಪಕ್ಷಿಕೆರೆಯ ಸಾಲುಮರದ ತಿಮ್ಮಕ್ಕ ಅಭಿಮಾನಿ ಬಳಗದ ಮುಖ್ಯಸ್ಥ, ಕೃಷಿಕ ವಾಲ್ಟರ್ ಪಕ್ಷಿಕೆರೆಯವರ ಸುಮಾರು ಅರ್ಧ ಎಕರೆ ಭತ್ತದ ಪೈರು ಮಳೆಗೆ ಕೊಚ್ಚಿ ಹೋಗಿದೆ. ಕೊರೊನಾದ ಈ ದಿನಗಳಲ್ಲಿ ಮೊದಲೇ ಸೋತು ಹೋಗಿರುವ ರೈತರಿಗೆ ಕೃಷಿ ಹಾನಿ ಮತ್ತಷ್ಟು ಆರ್ಥಿಕ ಹೊಡೆತ ನೀಡಲಿವೆ ಎಂದು ವಾಲ್ಟರ್ ಡಿಸೋಜ ಆತಂಕ ವ್ಯಕ್ತಪಡಿಸಿದ್ದಾರೆ.
Kshetra Samachara
14/10/2020 10:55 am