ಉಡುಪಿ: ಪ್ರಕೃತಿ ಮಡಿಲಲ್ಲಿ ಕಾನನದ ನಡುವೆ ಮೈದುಂಬಿ ಹರಿಯುವ ಜಲಪಾತ ತೊಂಬಟ್ಟು ಫಾಲ್ಸ್.ಹಸಿರ ವನದಿಂದ ಹರಿದು ಬರುವ ಬೆಳ್ನೊರೆಯ ನೀರು, ಹಾಲಿನ ಹೊಳೆಯಾಗಿ ಇಲ್ಲಿ ಧುಮ್ಮಿಕ್ಕುತ್ತಿದೆ.ನೀರವ ವಾತಾವರಣದ ನಡುವೆ ಬಂಡೆಯಿಂದ ಕೆಳಗಿಳಿಯುವ ಜಲಧಾರೆ ಕಿವಿಗೆ ಇಂಪು ನೀಡುವ ಸದ್ದಿನೊಂದಿಗೆ ನರ್ತಿಸುತ್ತಾ ಬಂಡೆಯಿಂದ ತಗ್ಗಿನ ಬಂಡೆಗೆ ಹರಿದು ಮುಂದುವರಿಯುವ ನೋಟ ಮನಮೋಹಕ. ಪ್ರಕೃತಿ ಮಡಿಲಿನ ಜಲಪಾತದಲ್ಲಿ ಒಮ್ಮೆ ಕುಳಿತು ಇಡೀ ಪರಿಸರ ಅವಲೋಕಿಸಿದರೆ ಭೂ ಸ್ವರ್ಗ ಎನ್ನುವಂತೆ ಭಾಸವಾಗುವುದರ ಜತೆಗೆ ಹಕ್ಕಿಯ ಚಿಲಿಪಿಲಿ ನಾದ ಹಿನ್ನೆಲೆ ಸಂಗೀತದಂತೆ ಮಾರ್ದನಿಸುತ್ತದೆ.
ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮದ ತೊಂಬಟ್ಟು ಸಮೀಪದ ಇರ್ಕಿಗದ್ದೆಯ ಅಬ್ಬಿ ಜಲಪಾತದ ದೃಶ್ಯವಿದು.
ಕೆಲವು ತಿಂಗಳುಗಳಿಂದ ಕೊರೊನಾದಿಂದಾಗಿ ಇಡೀ ವಿಶ್ವ, ದೇಶವೇ ತತ್ತರಿಸಿ ಹೋಗಿದೆ. ಈ ನಿಟ್ಟಿನಲ್ಲಿ ಮನೆಯಲ್ಲಿಯೇ ಕುಳಿತು ಬೇಸತ್ತಿರುವ ಅನೇಕರು, ಈಗ ಕರಾವಳಿ ಭಾಗದ ಹಲವು ಜಲಪಾತಗಳತ್ತ ಮುಖ ಮಾಡಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಯೊಳಗೇ ಮಂದವಾಗಿದ್ದ ಮನಸ್ಸುಗಳು ಇಲ್ಲೀಗ ಹಾರುವ ಹಕ್ಕಿಯಂತೆ ಹಾರಾಡುವಂತಾಗಿದೆ ಎನ್ನುವುದು ಇಲ್ಲಿಯ ಪ್ರವಾಸಿಗರ ಅನುಭವದ ಮಾತು. ಒಟ್ಟಾರೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಕೊರೊನಾ ನಿಯಮಾವಳಿ ಉಲ್ಲಂಘಿಸದಂತೆ ನೋಡಿಕೊಳ್ಳಬೇಕಾದ ಗುರುತರ ಜವಾಬ್ದಾರಿಯೂ ಸಂಬಂಧಿತ ಇಲಾಖೆಯ ಮುಂದಿದೆ.
ಸಂದೇಶ್ ಶೆಟ್ಟಿ ಆಜ್ರಿ, ಪಬ್ಲಿಕ್ ನೆಕ್ಸ್ಟ್ ಉಡುಪಿ
Kshetra Samachara
31/10/2020 04:24 pm