ಮಂಗಳೂರು: ನಗರದ ಕಾವೂರು ಪರಿಸರದಲ್ಲಿ ಸಿಕ್ಕಿರುವ ರೆಕ್ಕೆ ತುಂಡರಿಸಲಾಗಿದ್ದ ಅಪರೂಪದ ಅಲೆಗ್ಸಾಂಡ್ರಿನ್ ಗಿಳಿಯನ್ನು ಪ್ರಾಣಿ ರಕ್ಷಕ ತೌಸೀಫ್ ರಕ್ಷಣೆ ಮಾಡಿದ್ದಾರೆ.
ಈ ಅಲೆಗ್ಸಾಂಡ್ರಿನ್ ಗಿಳಿಯ ರೆಕ್ಕೆಯನ್ನು ಕತ್ತರಿಸಿರುವುದರಿಂದ ಹಾರಲಾರದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೆಕ್ಕಿನ ದಾಳಿಯಿಂದ ಗಿಳಿಯನ್ನು ರಕ್ಷಿಸಿರುವ ತೌಸೀಫ್, ಈ ಗಿಳಿಯನ್ನು ಲಿಟಲ್ ಪಾವ್ಸ್ ಕ್ಲಿನಿಕ್ ಗೆ ಕೊಂಡೊಯ್ದರು. ಅಲ್ಲಿ ಡಾ.ಹರೀಶ್ ಪರಿಶೀಲನೆ ನಡೆಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗಿಳಿಯನ್ನು ಅನಿಮಲ್ ಕೇರ್ ಟ್ರಸ್ಟ್ ಗೆ ಕೊಂಡೊಯ್ಯಲಾಗಿದೆ.
ಇದೀಗ ಈ ಅಲೆಗ್ಸಾಂಡ್ರಿನ್ ಗಿಳಿಗೆ ಅಲ್ಲಿ ಶೂಶ್ರೂಷೆ ದೊರಕಿದೆ. ಆದರೆ, ನುರಿತರಲ್ಲದವರು ರೆಕ್ಕೆಯನ್ನು ಕತ್ತರಿಸಿರುವ ಪರಿಣಾಮ ಗಿಳಿಯು ಸಂಪೂರ್ಣ ಚೇತರಿಸಿಕೊಳ್ಳಲು ಇನ್ನೂ ಐದಾರು ತಿಂಗಳು ಬೇಕಾಗುತ್ತದೆ.
ಈ ಗಿಳಿಯನ್ನು ರಕ್ಷಣೆ ಮಾಡಿದ ಪ್ರಾಣಿ ರಕ್ಷಕ ತೌಸೀಫ್ ಮಾಹಿತಿ ನೀಡಿ, ಈ ಗಿಳಿಯು ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಜೀವಿಸುವ ಅಪರೂಪದ ಪಕ್ಷಿಯಾಗಿದೆ. ಆದರೆ, ಯಾರೋ ಇದನ್ನು ಕಾನೂನು ಬಾಹಿರವಾಗಿ ಮನೆಯಲ್ಲಿ ಸಾಕಿದ್ದಾರೆ.
ಅಲ್ಲಿಂದ ತಪ್ಪಿಸಿಕೊಂಡು ಬಂದಿರುವ ಈ ಪಕ್ಷಿ ಬೆಕ್ಕಿನ ದಾಳಿಗೆ ಒಳಗಾಗಿತ್ತು.
ಮಾಹಿತಿ ಲಭ್ಯವಾದ ತಕ್ಷಣ ತಾನು ಅಲ್ಲಿಗೆ ಧಾವಿಸಿ ಗಿಳಿಯನ್ನು ರಕ್ಷಿಸಿದ್ದೇನೆ. ಇದೀಗ ಅನಿಮಲ್ ಕೇರ್ ಟ್ರಸ್ಟ್ ನಲ್ಲಿ ಶುಶ್ರೂಷೆಯಲ್ಲಿರುವ ಈ ಅಲೆಗ್ಸಾಂಡ್ರಿನ್ ಗಿಳಿಯು ಮತ್ತೆ ಮೊದಲಿನಂತಾಗಲು 3-5 ತಿಂಗಳು ಬೇಕಾದೀತು. ಮತ್ತೆ ಅದು ಯಥಾಸ್ಥಿತಿಗೆ ಬಂದ ಬಳಿಕ ಅದನ್ನು ಅರಣ್ಯಕ್ಕೆ ಬಿಡುವ ಚಿಂತನೆ ಇದೆ ಎಂದರು.
Kshetra Samachara
03/05/2022 05:54 pm