ವರದಿ: ರಹೀಂ ಉಜಿರೆ
ಮಲ್ಪೆ: ಉಡುಪಿಯ ಮಲ್ಪೆ ಬೀಚ್‌ಗೆ ನೀವು ಪ್ರವಾಸ ಬರುವ ಪ್ಲಾನ್ ಮಾಡಿದ್ರೆ, ನಿಮಗೆ ನಿರಾಸೆ ಆಗೋದು ಗ್ಯಾರಂಟಿ. ಯಾಕೆಂದರೆ ಮಳೆಗಾಲ ಪರಿಣಾಮ ಕಡಲು ಪ್ರಕ್ಷುಬ್ಧಗೊಂಡಿರುವುದರಿಂದ ಜೀವ ಹಾನಿ ಆಗುವ ಸಾಧ್ಯತೆ ಹೆಚ್ಚು. ಹೀಗಾಗಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಬೀಚ್‌ಗೆ ತಡೆಬೇಲಿ ನಿರ್ಮಿಸಲಾಗಿದೆ.
ಪ್ರತಿವರ್ಷ ಜೂನ್ ತಿಂಗಳಲ್ಲಿ ಕಡಲ ಅಲೆಗಳ ಅಬ್ಬರ ಬಲು ಜೋರು. ಈ ಸಮಯದಲ್ಲಿ ನೀರಿಗೆ ಇಳಿದರೆ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತೆ. ಇತ್ತೀಚೆಗೆ ಸಮುದ್ರದಲೆಗಳ ಜೊತೆಗೆ ಆಟವಾಡುತ್ತಿದ್ದ ಕೆಲ ಪ್ರವಾಸಿಗರು ನೀರಲ್ಲಿ ಕೊಚ್ಚಿಕೊಂಡು ಹೋದ ಉದಾಹರಣೆಗಳಿವೆ. ಅಲ್ಲದೆ, ಪ್ರವಾಸಿಗರು ಬೀಚ್‌ನಲ್ಲಿ ಇರುವ ಲೈಫ್ ಗಾರ್ಡ್‌ಗಳ ಎಚ್ಚರಿಕೆಯನ್ನೂ ಮೀರಿ ಅಪಾಯ ಮೈಮೇಲೆ ಎಳೆದುಕೊಳ್ಳುತ್ತಾರೆ. ಇದನ್ನು ಮನಗಂಡು ಮುಂದಿನ ಮೂರು ತಿಂಗಳವರೆಗೆ ಕಡಲಿಗೆ ಇಳಿಯೋದನ್ನು ನಿಷೇಧಿಸಿ ತಡೆಬೇಲಿ ಹಾಕಲಾಗಿದೆ.
ಮಲ್ಪೆ ಕಡಲಿಗೆ ಇಳಿಯುವ ದ್ವಾರದ ಬಳಿ ಸುಮಾರು ಒಂದು ಕಿಲೋಮೀಟರ್ ಉದ್ದಕ್ಕೂ 5 ಅಡಿಯಷ್ಟು ಎತ್ತರದ ಬಲೆ ಅಳವಡಿಸಲಾಗಿದೆ. ಅಪಾಯವನ್ನು ಸೂಚಿಸಲು ಕೆಂಪು ಧ್ವಜವನ್ನು ಅಲ್ಲಲ್ಲಿ ಕಟ್ಟಲಾಗಿದೆ. ಸದ್ಯ ಬೀಚ್ ಗೆ ಇಳಿಯೋದಕ್ಕೆ ಅವಕಾಶ ಇಲ್ಲ. ಇದು ಗೊತ್ತಿಲ್ಲದೆ ದೂರದ ಊರುಗಳಿಂದ ಬರುವ ಪ್ರವಾಸಿಗರು ನಿರಾಶರಾಗುತ್ತಿದ್ದಾರೆ.
ಸದ್ಯ ಬೀಚ್ ಗೆ ತಡೆಬೇಲಿ ಹಾಕಿರುವುದರಿಂದ ದೂರದಲ್ಲೇ ಬೀಚ್ ನೋಡಿ ವಾಪಸಾಗಬೇಕಾಗುತ್ತದೆ. ಹೀಗಾಗಿ ಬೀಚ್ ಗೆ ಬರುವ ಪ್ಲಾನ್ ಹಾಕಿದ್ದರೆ ಮುಂದೂಡುವುದು ಒಳಿತು.
PublicNext
11/06/2022 03:54 pm