ಮಂಗಳೂರು: ಇತ್ತೀಚೆಗೆ ಬಿಕರ್ನಕಟ್ಟೆಯಲ್ಲಿನ ರಸ್ತೆ ಹೊಂಡಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿ ಬಲಿಯಾದ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ 75ರ ಬಂಟ್ವಾಳದ ಕಲ್ಲಡ್ಕದಲ್ಲಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವರು ರಸ್ತೆ ಗುಂಡಿ ಹಾಗೂ ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಬೆನ್ನುಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಯಮಯಾತನೆ ಪಡುತ್ತಿದ್ದಾರೆ.
ಇಂಜಿನಿಯರಿಂಗ್ ವಿದ್ಯಾರ್ಥಿ ಆತಿಕ್ ಬೈಕ್ ಹೊಂಡಕ್ಕೆ ಬಿದ್ದು ರಸ್ತೆಗೆಸೆಯಲ್ಪಟ್ಟು ಪ್ರಾಣವನ್ನೇ ಕಳೆದುಕೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಬೆಳ್ಳಾರೆಯ ತಡೆಕಜೆ ನಿವಾಸಿ ವಿಜಯ ಕುಮಾರ್ ರಸ್ತೆಗುಂಡಿಯಿಂದ ಬೆನ್ನುಮೂಳೆ ಮುರಿತಕ್ಕೊಳಗಾಗಿದ್ದಾರೆ. ಕಾರ್ಯ ನಿಮಿತ್ತ ಮಂಗಳೂರಿಗೆ ಆಗಮಿಸಿದ್ದ ಅವರು, ಮರಳುತ್ತಿದ್ದಾಗ ಕಲ್ಲಡ್ಕದಲ್ಲಿ ಬಸ್ ಏಕಾಏಕಿ ಗುಂಡಿಗೆ ಬಿದ್ದಿದೆ. ಪರಿಣಾಮ ಹಿಂಬದಿ ಸೀಟ್ ನಲ್ಲಿದ್ದ ವಿಜಯ್ ಕುಮಾರ್ ಮೇಲಕ್ಕೆ ಎಸೆಯಲ್ಪಟ್ಟು ಸೀಟಿಗೆ ಬಿದ್ದು ಬೆನ್ನುಮೂಳೆ ಹಾಗೂ ಕತ್ತಿನ ಸಮೀಪದ ಮೂಳೆ ಮುರಿತಕ್ಕೊಳಗಾಗಿದ್ದಾರೆ.
ಕಲ್ಲಡ್ಕದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಅಲ್ಲಲ್ಲಿ ಹೊಂಡಗಳು ನಿರ್ಮಾಣವಾಗಿತ್ತು. ಚಾಲಕ ಅಬ್ದುಲ್ಲನ ನಿರ್ಲಕ್ಷ್ಯದಿಂದ ಬಸ್ ಏಕಾಏಕಿ ಹೊಂಡಕ್ಕೆ ಬಿದ್ದಿದೆ. ಬಸ್ ಗುಂಡಿಗೆ ಬಿದ್ದ ರಭಸಕ್ಕೆ ಹಿಂಬದಿ ಸೀಟ್ ನಲ್ಲಿದ್ದ ವಿಜಯ್ ಕುಮಾರ್ ಮೇಲಕ್ಕೆ ಎಸೆಯಲ್ಪಟ್ಟು ಕೆಳಕ್ಕೆ ಬಿದ್ದಿದ್ದಾರೆ. ಈ ವೇಳೆ ಸೀಟ್ ನ ರಾಡ್ ಸೊಂಟಕ್ಕೆ ಗುದ್ದಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರು ಸೊಂಟದ ಮೂಳೆ ಸೆಳೆತಕ್ಕೆ ಒಳಗಾಗಿ ನೋವಿನಿಂಡ ಕಿರುಚಾಡಿದ್ದಾರೆ. ಪರಿಸ್ಥಿತಿಯ ಗಂಭೀರತೆ ಅರಿತ ಚಾಲಕ ಬಸ್ ನ್ನು ನೇರವಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ವಿಜಯ್ ಕುಮಾರ್ ಅವರನ್ನು ವೆನ್ಲಾಕ್ ಗೆ ದಾಖಲಿಸಿದ್ದಾರೆ.
ಪತ್ನಿ, ಇಬ್ಬರು ಮಕ್ಕಳಿರುವ ಸಂಸಾರದ ನೊಗ ಹೊತ್ತಿದ್ದ ವಿಜಯ್ ಕುಮಾರ್, ಯಾರದ್ದೋ ನಿರ್ಲಕ್ಷ್ಯಕ್ಕೆ ನೋವು ಅನುಭವಿಸುವಂತಾಗಿದೆ. ಆಸ್ಪತ್ರೆಯ ಖರ್ಚು - ವೆಚ್ಚಕ್ಕೂ ಪರದಾಡುತ್ತಿರುವ ಅವರೀಗ ಅಸಹಾಯಕರಾಗಿದ್ದರೆ. ನಿರ್ಲಕ್ಷ್ಯದ ಚಾಲನೆಯ ಹಿನ್ನೆಲೆಯಲ್ಲಿ ಬಸ್ ಚಾಲಕ ಅಬ್ದುಲ್ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
23/08/2022 06:42 pm