ಸುಬ್ರಹ್ಮಣ್ಯ: ಒಂದು ರಸ್ತೆಯ ಅವ್ಯವಸ್ಥೆಯಿಂದಾಗಿ ಪುಟ್ಟ ಮಕ್ಕಳು ಸೇರಿದಂತೆ ಸಾರ್ವಜನಿಕರು ಅಪಾಯಕಾರಿ ಸನ್ನಿವೇಶದ ಸಂಚಾರ ಸಂಕಷ್ಟ ಎದುರಿಸುವಂತಾಗಿದೆ.
ದ.ಕ. ಜಿಲ್ಲೆಯ ಕಡಬ ತಾಲೂಕಿನ ಐತೂರು ಗ್ರಾಪಂ ವ್ಯಾಪ್ತಿಯ ನೆಲ್ಲಿಕಟ್ಟೆಯಿಂದ ಓಟಗಜ್ಜೆಗೆ ಹೋಗುವ ರಸ್ತೆಯನ್ನು ಅಗೆದು ಹಾಕಿರುವುದರಿಂದ ಈ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಶಾಲಾ ಮಕ್ಕಳ ಸಹಿತ ಗ್ರಾಮಸ್ಥರು ಪಕ್ಕದ ರೈಲ್ವೆ ಹಳಿ ಮೇಲೆ ಮತ್ತು ರಬ್ಬರ್ ಪ್ಲಾಂಟೇಷನ್ ಗೆ ಅಳವಡಿಸಿರುವ ವಿದ್ಯುತ್ ತಡೆಬೇಲಿ ಮಧ್ಯೆ ನುಸುಳಿಕೊಂಡು ಅಪಾಯಕಾರಿ ರೀತಿಯಲ್ಲಿ ಮನೆಗೆ ಹೋಗುವ ಸನ್ನಿವೇಶ ಎದುರಾಗಿದೆ.
ತಮಗಾಗಿರುವ ಸಮಸ್ಯೆ ಬಗ್ಗೆ ಕಡಬ ತಹಶೀಲ್ದಾರ್ ಸೇರಿದಂತೆ ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದರೂ ಇವರು ನಿದ್ದೆಯಲ್ಲಿದ್ದಾರೆ ಎಂಬ ಆರೋಪ ಸಾರ್ವಜನಿಕರದ್ದು. ಪ್ರಸ್ತುತ ರಸ್ತೆ ಕೆಟ್ಟುಹೋದ ಹಿನ್ನೆಲೆಯಲ್ಲಿ ಇವರು ಸಂಚರಿಸುವ ರಸ್ತೆಯಲ್ಲಿ 2 ಕಿ.ಮೀ. ರೈಲ್ವೆ ಟ್ರ್ಯಾಕ್ ಮತ್ತು ಬ್ರಿಡ್ಜ್ ಇದ್ದು, ಪುಟ್ಟ ಮಕ್ಕಳ ಸಹಿತ ದೊಡ್ಡವರೂ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾಗಿದೆ!
ಇದಲ್ಲದೆ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ರಬ್ಬರ್ ಪ್ಲಾಂಟೇಷನ್ ಜಾಗ ಇದ್ದು, ಸೋಲಾರ್ ವಿದ್ಯುತ್ ತಂತಿ ಬೇಲಿ ಅಳವಡಿಸಲಾಗಿದೆ. ಇದರ ನಡುವೆ ಮಕ್ಕಳು ನುಸುಳಿಕೊಂಡು ಹೋಗುವ ಅಪಾಯಕಾರಿ ಸ್ಥಿತಿ ಎದುರಾಗಿದೆ. ಮಕ್ಕಳು ಸಂಚರಿಸುವ ವೇಳೆ ಇದನ್ನು ಆಫ್ ಮಾಡಲಾಗುತ್ತಿದೆ ಎನ್ನಲಾಗುತ್ತಿದ್ದರೂ ಏನಾದರೂ ಆಚಾತುರ್ಯ ವಾದರೆ ಅಪಾಯ ಗ್ಯಾರಂಟಿ. ಒಟ್ಟಿನಲ್ಲಿ ಈ ರಸ್ತೆಯನ್ನು ಶೀಘ್ರ ಸರಿಪಡಿಸಿ ಜನರು ಭಯರಹಿತರಾಗಿ ಓಡಾಡಲು ಅವಕಾಶ ಮಾಡಿ ಕೊಡಬೇಕೆಂದು ನೀತಿ ಸಾಮಾಜಿಕ ಸಂಘಟನೆ ರಾಜ್ಯಾಧ್ಯಕ್ಷ ಜಯಂತ್ ಆಗ್ರಹಿಸಿದ್ದಾರೆ.
Kshetra Samachara
20/07/2022 10:01 am