ಕಾಪು: ಭಾರೀ ಮಳೆಯಿಂದಾಗಿ ಕಾಪು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೀರು ನಿಂತು ಹೆದ್ದಾರಿ ಸಂಚಾರಕ್ಕೆ ತೊಂದರೆಯುಂಟಾಗುತ್ತಿದ್ದು, ಅಪಘಾತದ ಭೀತಿ ಎದುರಾಗಿದೆ.
ಪ್ರತೀ ಬಾರಿ ಮಳೆ ಬಂದಾಗಲೂ ಇಲ್ಲಿನ ಪರಿಸ್ಥಿತಿ ಇದೇ ಆಗಿದೆ. ಕಾಪುವಿನಲ್ಲಿರುವ ಮಂಗಳೂರು - ಉಡುಪಿ ಹೆದ್ದಾರಿ ಮತ್ತು ಸರ್ವೀಸ್ ರಸ್ತೆಯಲ್ಲಿ ಸಂಪೂರ್ಣ ನೀರು ನಿಂತು ಹೆದ್ದಾರಿಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ರಿಕ್ಷಾ ಮತ್ತು ದ್ವಿಚಕ್ರ ವಾಹನ ಸವಾರರಂತೂ ಪ್ರಾಣ ಕೈಯ್ಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಅನಿವಾರ್ಯತೆಯಿದೆ.
ರಾ.ಹೆ. 66ರ ಚತುಷ್ಪಥ ಯೋಜನೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹೆದ್ದಾರಿ ಬದಿಯ ಕೆಲವೆಡೆ ಚರಂಡಿಯಲ್ಲಿ ಮಳೆನೀರು ಹರಿದು ಹೋಗದೇ ಸಂಚಾರಕ್ಕೆ ತೊಂದರೆಯುಂಟಾಗುತ್ತಿದೆ. ಕಾಪು ವಿದ್ಯಾನಿಕೇತನ ಶಾಲೆ ಬಳಿಯ ಹೆದ್ದಾರಿಯಲ್ಲಿ ಕಳೆದ ಹಲವು ವರ್ಷಗಳಿಂದ ಇದೇ ರೀತಿಯ ಅಸ್ತವ್ಯಸ್ತತೆಯಿದ್ದು ಈ ಬಗ್ಗೆ ಹೆದ್ದಾರಿ ಇಲಾಖೆ, ಗುತ್ತಿಗೆದಾರರು ಮತ್ತು ಕಾಪು ಪುರಸಭೆಗೆ ಹಲವು ಬಾರಿ ಮನವಿ ನೀಡಲಾಗಿದೆ. ಯಾರೂ ಕೂಡ ಈ ಬಗ್ಗೆ ಸೂಕ್ತ ಸ್ಪಂದನೆ ನೀಡದೇ ಜನರ ಸಮಸ್ಯೆಯನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಜಯರಾಮ ಆಚಾರ್ಯ ಆರೋಪಿಸಿದ್ದಾರೆ.
Kshetra Samachara
16/07/2022 07:23 pm