ಬ್ರಹ್ಮಾವರ : ತೀರಾ ಅಪಾಯಕಾರಿಯಾಗಿದ್ದ ಶತಮಾನದಷ್ಟು ಹಳೆಯ ಅಶ್ವತ್ಥ ಮತ್ತು ಆಲದ ಮರವನ್ನು ಧರೆಗೆ ಉರುಳಿಸಿ ವಾಹನ ಸವಾರರನ್ನು ಅಪಾಯದಿಂದ ಪಾರು ಮಾಡಿದ ಘಟನೆ ಬ್ರಹ್ಮಾವರದಲ್ಲಿ ನಡೆಯಿತು.
ಬ್ರಹ್ಮಾವರ- ಬಾರಕೂರು ರಸ್ತೆಯ ಹಂದಾಡಿಯಲ್ಲಿದ್ದ ಈ ಮರಗಳ ಅಡಿಯಲ್ಲಿದ್ದ ರಸ್ತೆ ಮೂಲಕ ಸಾವಿರಾರು ಪಾದಚಾರಿಗಳು ಸಾಗುತ್ತಿದ್ದರು. ಮರದ ಕೆಳಗಿದ್ದ ರಸ್ತೆ ಮೂಲಕ ಬಸ್ ಆಟೋ ಲಾರಿ ಟೆಂಪೋ ಗಳು ಸಂಚಾರ ಮಾಡುತ್ತಿದ್ದುದಲ್ಲದೆ ಈ ಪರಿಸರದಲ್ಲಿ ಅನೇಕ ಮನೆಗಳಿವೆ.
ಗಾಳಿ ಮಳೆಯಾಗುವ ಸಂದರ್ಭ ಗ್ರಾಮಸ್ಥರು ಆತಂಕದಲ್ಲೇ ಇಲ್ಲಿ ಅತ್ತಂದಿತ್ತ ಓಡಾಡಬೇಕಾಗಿತ್ತು.ಈ ಮರವನ್ನು ಕಡಿಯಲು ಗ್ರಾಮಸ್ಥರು ಹಲವು ವರ್ಷಗಳಿಂದ ಇಲಾಖೆಗೆ ಮನವಿ ಮಾಡಿದ್ದರು. ಮರ ಕಡಿಯುವ ವಿಚಾರವಾಗಿ ಹಂದಾಡಿ ಗ್ರಾಮ ಪಂಚಾಯತಿ ಮತ್ತು ಬ್ರಹ್ಮಾವರ ತಾಲೂಕು ಪಂಚಾಯತಿ ಸಭೆಯಲ್ಲೂ ಚರ್ಚೆಯಾಗಿತ್ತು. ಕೊನೆಗೆ ಅಪಾಯಕಾರಿ ಮರಗಳನ್ನು ಕಟಾವು ಮಾಡಲು ಆದೇಶ ಪಡೆದು, ಬೃಹತ್ ಯಂತ್ರಗಳು ಮತ್ತು ಮರ ಕಟಾವು ಮಾಡುವ ಪರಿಣಿತರು ಮರ ಕಟಾವು ಮಾಡಿದ್ದಾರೆ. ಈ ಸಂದರ್ಭ ಅರಣ್ಯ, ಮೆಸ್ಕಾಂ, ಕಂದಾಯ, ಪೋಲಿಸ್, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಹಂದಾಡಿ ಗ್ರಾಮ ಪಂಚಾಯತಿ ಸದಸ್ಯರುಗಳು ಹಾಜರಿದ್ದರು.
Kshetra Samachara
16/07/2022 07:09 pm