ಮಂಗಳೂರು: ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಮಾಡಿದವರ, ನಿರುದ್ಯೋಗಿಗಳಿಗೆ ಉದ್ಯೋಗ ನೀಡದವರ, ಶಿಕ್ಷಣವನ್ನು ನೀಡದೆ ವಂಚಿಸಿದವರ, ಕಾರ್ಮಿಕರ ವಿರುದ್ಧ ಕಾಯ್ದೆಗಳನ್ನು ಜಾರಿಗೊಳಿಸಿ ಕಾರ್ಮಿಕರ ವಿರುದ್ಧ ಹೋರಾಡುವವರ ವಿರುದ್ಧ ನಾವು ಹೋರಾಡೋಣ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ (ಎಐಬಿಇಎ) ರಾಷ್ಟ್ರೀಯ ಸಮಿತಿ ಸದಸ್ಯ ಹಾಗೂ ದ.ಕ.ಜಿಲ್ಲಾ ಬ್ಯಾಂಕ್ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ವಿನ್ಸೆಂಟ್ ಡಿಸೋಜ ಹೇಳಿದರು.
ಎಐಟಿಯುಸಿ ಮಂಗಳೂರು ಘಟಕದ ವತಿಯಿಂದ ಇಂದು ಮಂಗಳೂರಿನ ಕಾಮ್ರೇಡ್ ಸಿಂಪ್ಸನ್ ಸೋನ್ಸ್ ಸಭಾಂಗಣದಲ್ಲಿ ನಡೆದ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ಇಂದು ಧಾರ್ಮಿಕ ಮತ್ತು ಕೋಮುವಿಚಾರಗಳನ್ನು ಮುಂದಿಟ್ಟುಕೊಂಡು ಕಾರ್ಮಿಕರ ಒಗ್ಗಟ್ಟನ್ನು ಮುರಿಯಲಾಗುತ್ತಿದೆ ಎಂದು ಹೇಳಿದರು.
ಇಂದು ಕಾರ್ಮಿಕರ ಒಗ್ಗಟ್ಟಿನ ಹೋರಾಟ ಕ್ಷೀಣಿಸುತ್ತಿದೆ. ಇದನ್ನರಿತ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಲಕ ವರ್ಗಗಳ ನಿರ್ದೇಶನದಂತೆ ಕಾರ್ಮಿಕ ಕಾಯ್ದೆಗಳನ್ನು ಮಾಲಕರ ಪರವಾಗಿ ಬದಲಾಯಿಸುತ್ತಿದೆ. ಶಿಕ್ಷಣಕ್ಕೆ ಪೂರಕವಾದ ಉದ್ಯೋಗವಿಲ್ಲದೆ, ಸರಕಾರದ ತಪ್ಪು, ಅಪ್ರಬುದ್ಧ ನೀತಿಗಳಿಂದಾಗಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ನಾವು ರಾಜಕೀಯ ಪ್ರಜ್ಞಾವಂತಿಕೆಯನ್ನು ಬೆಳೆಸಿಕೊಂಡು ವೈಜ್ಞಾನಿಕ ದೃಷ್ಟಿಕೋನದಿಂದ ಬದುಕಿಗಾಗಿ ಹೋರಾಡಬೇಕು ಮತ್ತು ಹೋರಾಡಲು ಬದುಕಬೇಕು ಎಂದು ಕಾಮ್ರೇಡ್ ವಿನ್ಸೆಂಟ್ ಡಿಸೋಜ ಕರೆ ನೀಡಿದರು.
Kshetra Samachara
01/05/2022 11:13 pm