ಮೂಡುಬಿದಿರೆ: ಮೂಡುಬಿದಿರೆ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ಒಳಗೊಂಡಿರುವ ಪ್ರದೇಶ. ಇದು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆದು ಕಣ್ಣಿಗೆ ರಸದೌತಣವನ್ನು ಉಣಬಡಿಸುವ ಸುಂದರ ತಾಣ. ಇಂತಹ ಅನೇಕ ಪ್ರವಾಸಿ ತಾಣಗಳಲ್ಲಿ ಮಹಾತ್ಮಾ ಗಾಂಧಿ ಪಾರ್ಕ್ ಕೂಡಾ ಒಂದು ಪ್ರಮುಖ ಸ್ಥಳ. ಒಂದು ಕಾಲದಲ್ಲಿ ಸ್ಥಳೀಯರು ಮಾತ್ರವಲ್ಲದೇ ಪ್ರವಾಸಿಗರು ಹೆಚ್ಚಾಗಿ ಭೇಟಿನೀಡುತ್ತಿರುವ ಈ ಪಾರ್ಕ್ ಮಕ್ಕಳ ಅಚ್ಚುಮೆಚ್ಚಿನ ತಾಣ ಇದಾಗಿತ್ತು. ಆದರೆ ಈ ಉದ್ಯಾನವನ ಈಗ ಅವ್ಯವಸ್ಥೆಯ ಆಗರವಾಗಿದೆ.
ಮೂಡಬಿದಿರೆಯಿಂದ ಧರ್ಮಸ್ಥಳ ರಸ್ತೆಯ ಸಮೀಪವಿರುವ ಈ ಪಾರ್ಕು, ಮಹಾತ್ಮಾ ಗಾಂಧಿಯ ಜನ್ಮ ಶತಾಬ್ಧಿಯ ವರ್ಷದಲ್ಲಿ ರೋಟರೀ ಕ್ಲಬ್ ಮತ್ತು ಸ್ಥಳೀಯರಿಂದ ನಿರ್ಮಿಸಲ್ಪಟ್ಟಿದೆ. ಈ ಪಾರ್ಕ್ಅನ್ನು ಪ್ರವೇಶ ಮಾಡಿದಾಗ ಎದುರಿಗೆ ಕಾಣ ಸಿಗೋದೇ ಗಾಂಧೀಜಿ ಪ್ರತಿಮೆ. ಮರಗಿಡಗಳಿಂದ ಆವೃತವಾಗಿರುವ ಈ ಪಾರ್ಕ್‌ನಲ್ಲಿ ಮಕ್ಕಳಿಗೆ ವಿವಿಧ ಆಟದ ಪರಿಕರಗಳು, ಕುಳಿತುಕೊಳ್ಳುವ ಆಸನ, ವಿಶಾಲವಾದ ಸ್ಥಳದಿಂದಾಗಿ ಮೂಡುಬಿದಿರೆ ಪರಿಸರದಲ್ಲಿ ಮನೆಮಾತಾಗಿದೆ. ಹೀಗೆ ಉತ್ತಮ ವ್ಯವಸ್ಥೆಗಳಿರುವ ಈ ಪಾರ್ಕ್‌ನ ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನು ಮೂಡುಬಿದಿರೆ ಪುರಸಭೆಯು ವಹಿಸಿಕೊಂಡಿದೆ..
ಹೀಗೆ ಎಲ್ಲಾ ಸೌಲಭ್ಯಗಳಿಂದ ಸುಸಜ್ಜಿಗೊಂಡಿದ್ದ ಗಾಂಧಿ ಪಾರ್ಕ್ ಉತ್ತಮ ನಿರ್ವಹಣೆಯ ಕೊರತೆಯಿಂದ ಇಲ್ಲಿಗೆ ಬರುವವರ ಸಂಖ್ಯೆ ದಿನೇ ದಿನೆ ಕಡಿಮೆಯಾಗುತ್ತಿದೆ. ಆದಷ್ಟು ಬೇಗ ಪುರಸಭೆ ಈ ಪಾರ್ಕ್ಗೆ ಕಾಯಕಲ್ಪನೀಡಿ ಉತ್ತಮ ನಿರ್ವಹಣೆ ಮಾಡಿ ಮೂಡಬಿದಿರೆ ಜನತೆಯ ಬಳಕೆಗೆ ಪೂರಕವಾಗುವಂತಾಗಲಿ. ಇಲ್ಲಿ ಮತ್ತೆ ಮಕ್ಕಳ ಕಲರವದೊಂದಿಗೆ ಹಿರಿಯರ ಸಂತೋಷ ಹೆಚ್ಚಾಗಲಿ ಎಂಬುವುದೇ ನಮ್ಮೆಲ್ಲರ ಹಾರೈಕೆ.
Kshetra Samachara
04/02/2022 07:56 pm