ಉಡುಪಿ: ಕೃಷ್ಣನಗರಿಯ ಹಲವೆಡೆ ಕಳೆದ ಕೆಲವು ದಿನಗಳಿಂದ ದಾರಿದೀಪಗಳು ಉರಿಯುತ್ತಿಲ್ಲ.ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ 66 ಕರಾವಳಿ ಬೈಪಸ್ ನಿಂದ ಅಂಬಾಗಿಲು ಜಂಕ್ಷನ್ ತನಕ ದಾರಿದೀಪ ಕೆಟ್ಟುಹೋಗಿದ್ದು ಪಾದಚಾರಿಗಳು ಪರದಾಡುವಂತಾಗಿದೆ. ಅದರಲ್ಲೂ ಸಂಜೆ ನಂತರ ಅತ್ತಿಂದಿತ್ತ ಓಡಾಡುವ ಹೆಣ್ಣು ಮಕ್ಕಳು ಭಯಭೀತರಾಗಿ ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಇದಲ್ಲದೆ ದಿನಂಪ್ರತಿ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ.
ಈ ಸಮಸ್ಯೆಯ ಬಗ್ಗೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯ ಗಮನಸೆಳೆದರೂ ಪ್ರಯೋಜನವಾಗಿಲ್ಲ.ಈ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ದಿನಂಪ್ರತಿ ದೊಂದಿ ಅಥವಾ ಚಿಮಣಿಯನ್ನು ಉರಿಸುವ ವಿಭಿನ್ನ ರೀತಿಯ ಪ್ರತಿಭಟನೆಗೆ ಚಾಲನೆ ನೀಡಿದೆ. ಸಮಸ್ಯೆ ಬಗೆಹರಿಯುವವರೆಗೆ ಪ್ರತಿದಿನ ಇದೇ ರೀತಿ ಚಿಮಣಿ ಅಥವಾ ದೊಂದಿ ಉರಿಸಿ ಪಾದಚಾರಿಗಳಿಗೆ ನಮ್ಮಿಂದಾಗುವಷ್ಟು ಬೆಳಕು ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ಅನ್ಸಾರ್ ಅಹಮದ್ ರವರು ಹೇಳಿದ್ದಾರೆ.
ಈ ವಿನೂತನ ಪ್ರತಿಭಟನೆಯಲ್ಲಿ ಸುಧೀರ್ ಪೂಜಾರಿ ಉಡುಪಿ ತಾಲೂಕು ಅಧ್ಯಕ್ಷರು, ಶಾಹಿಲ್ ರಹಮತುಲ್ಲಾ, ಮಂಜು ನಾಸಿರ್ ಯಾಕೂಬ್, ಸುಹೇಲ್, ಇಂತಿಯಾಜ್, ಹಸನ್ ಸಾಹೇಬ್, ಅನಿಲ್ ಸೇರಿದಂತೆ 25 ಕಾರ್ಯಕರ್ತರು ಭಾಗಿಯಾದರು.
Kshetra Samachara
31/01/2022 08:10 am