ವಿಶೇಷ ವರದಿ: ರಹೀಂ ಉಜಿರೆ
ಪೆರಂಪಳ್ಳಿ: ಅಂಬಾಗಿಲು ಪೆರಂಪಳ್ಳಿ ಮಣಿಪಾಲ ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ.ಹಲವು ಅಡತಡೆಗಳ ಮಧ್ಯೆಯೂ ಕಾಮಗಾರಿ ನಡೆಯುತ್ತಿರುವುದು ಸಂತಸದ ಸಂಗತಿ.ಇದೇವೇಳೆ ಕೆಲವು ಕಡೆ ಕಾಮಗಾರಿ ವಿಳಂಬದಿಂದಾಗಿ ರಸ್ತೆ ಬದಿಯ ನಿವಾಸಿಗಳ ಗೋಳು ಹೇಳತೀರದು.
ಇದೇ ಭಾಗದ ಶೀಂಬ್ರಾ ಕೊಳಲಗಿರಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಧೂಳುಮಯವಾಗಿದ್ದು ,ಜನರು ಇತ್ತೀಚೆಗೆ ಚಿನ್ನದ ರಸ್ತೆಗೆ ಸ್ವಾಗತ ಎಂಬ ಬ್ಯಾನರ್ ಹಾಕಿ ಪ್ರತಿಭಟಿಸಿದ್ದರು.ಬಳಿಕ ಬ್ಯಾನರ್ ತೆಗೆಸಲಾಯಿತಾದರೂ ಪರಿಸ್ಥಿತಿ ಮಾತ್ರ ಹಾಗೇ ಇದೆ.
ಮಣ್ಣು ಮತ್ತು ಜಲ್ಲಿಯ ಧೂಳಿನಿಂದಾಗಿ ಇಲ್ಲಿಯ ನಿವಾಸಿಗಳು ಕಂಗೆಟ್ಟು ಹೋಗಿದ್ದಾರೆ. ಬಿವಿಟಿ ಯಿಂದ ಕೊಳಲಗಿರಿ ಸಂಪರ್ಕಿಸುವ ಈ ರಸ್ತೆ ಬಹುತೇಕ ಇಳಿಜಾರಿನಿಂದ ಕೂಡಿದೆ.ಮಳೆಗಾಲದಲ್ಲಿ ಹಲವು ವಾಹನ ಸವಾರರು ಇಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದುಂಟು.ಈಗ ಬಿರುಬಿಸಿಲು.ಬಿಸಿಲಲ್ಲಿ ಈ ಧೂಳು ತುಂಬಿದ ರಸ್ತೆಯಲ್ಲಿ ನಡೆದು ಹೋಗುವುದು ಮತ್ತು ವಾಹನ ಸವಾರಿ ಎರಡೂ ದುಸ್ತರ.
ಕಳೆದ ಎರಡು ವರ್ಷಗಳಿಂದ ನಾವು ನರಕಯಾತನೆ ಅನುಭವಿಸುತ್ತಿದ್ದೇವೆ ಎನ್ನುತ್ತಾರೆ ಸ್ಥಳೀಯರು. ಈ ಭಾಗದ ಮನೆಗಳು ,ಮರಮಟ್ಟು ಧೂಳಿನಿಂದಾಗಿ ಕೆಂಪು ಬಣ್ಣಕ್ಕೆ ತಿರುಗಿವೆ.ರಸ್ತೆಯ ಒಂದು ಬದಿ ವಾರಾಹಿ ನೀರಿಗಾಗಿ ಬೃಹತ್ ಪೈಪ್ ಲೈನ್ ಕೆಲವೂ ನಡೆಯುತ್ತಿರುವುದರಿಂದ ಈ ಭಾಗದ ಜನ ಇನ್ನಷ್ಟು ಸಮಯ ಧೂಳಲ್ಲೇ ಕಳೆಯಬೇಕಿದೆ.ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕಿದೆ.
Kshetra Samachara
25/01/2022 08:21 pm