ಮುಲ್ಕಿ: ಕಿನ್ನಿಗೋಳಿ ಸಮೀಪದ ಏಳಿಂಜೆ ಅಂಗಡಿಗುತ್ತು ಬಳಿ ಕೃಷಿಗೆ ಪೂರಕವಾಗಿ ಸೇತುವೆ ಹಾಗೂ ಅಣೆಕಟ್ಟು ನಿರ್ಮಾಣಕ್ಕೆ ಸ್ಥಳೀಯ ಆಡಳಿತ ಮುಂದಾಗಬೇಕು ಎಂದು ಕೃಷಿಕ ಲೋಕನಾಥ ಶೆಟ್ಟಿ ಸರಕಾರವನ್ನು ಆಗ್ರಹಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಕಿನ್ನಿಗೋಳಿ ಸಮೀಪದ ಏಳಿಂಜೆ ಅಂಗಡಿಗುತ್ತು ಎಂಬಲ್ಲಿ ಎಕರೆಗಟ್ಟಲೆ ಕೃಷಿಭೂಮಿಗೆ ನೀರುಣಿಸುವ ಶಾಂಭವಿ ನದಿಗೆ ಅಡ್ಡಲಾಗಿ ಯಾವುದೇ ಸೇತುವೆ ಇಲ್ಲದೆ, ಗ್ರಾಮಸ್ಥರಿಗೆ ಸಂಚಾರಕ್ಕೆ ತೀವ್ರ ತೊಂದರೆಯಾಗಿವುದನ್ನು ಮನಗಂಡು ಕೃಷಿಕ ಲೋಕನಾಥ್ ಶೆಟ್ಟಿ ಹಾಗೂ ರಮೇಶ್ ಮತ್ತಿತರರು ಸೇರಿಕೊಂಡು ಚೆಕ್ ಡ್ಯಾಂ ನಿರ್ಮಾಣ ಮಾಡುತ್ತಿದ್ದಾರೆ.
ಚೆಕ್ ಡ್ಯಾಮ್ ನಿರ್ಮಾಣದಿಂದ ಕೃಷಿಗೆ ಅನುಕೂಲವಾಗಿದ್ದು ಸೇತುವೆ ಮೇಲಿನಿಂದ ಸಂಚಾರ ಮಾತ್ರವಲ್ಲದೇ, ನೀರಿನ ಸಂಗ್ರಹದಿಂದ ಅಂತರ್ಜಲ ಏರಿಕೆಯಾಗಿ ಕೃಷಿಗೆ ಅನುಕೂಲವಾಗಿದೆ.
ಹಲವು ವರ್ಷಗಳಿಂದ ಚೆಕ್ ಡ್ಯಾಂ ಇತ್ಯಾದಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಲೋಕನಾಥ್ ಮಾಧ್ಯಮದೊಂದಿಗೆ ಮಾತನಾಡಿ ಈ ಪರಿಸರದಲ್ಲಿ ಪೂರ್ಣಪ್ರಮಾಣದ ಕಿರು ಸೇತುವೆ ನಿರ್ಮಾಣಕ್ಕೆ ಅನೇಕ ಬಾರಿ ಸ್ಥಳೀಯ ಆಡಳಿತದ ಮನವಿ ಸಲ್ಲಿಸಿದರೂ ಇದುವರೆಗೂ ಕಾರ್ಯಗತಗೊಂಡಿಲ್ಲ. ಪ್ರತಿ ಮಳೆಗಾಲದಲ್ಲಿ ಈ ಭಾಗದಲ್ಲಿ ಸಂಚರಿಸಲು ಅನಾನುಕೂಲವಾಗುತ್ತಿದ್ದು ಕಿಂಡಿ ಅಣೆಕಟ್ಟು ದುರಸ್ತಿಗೆ ಸರಕಾರದಿಂದ ಯಾವುದೇ ಅನುದಾನ ದೊರಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ಕೃಷಿಗೆ ಪೂರಕವಾಗಿ ಸರಕಾರದ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿದೆ. ಪ್ರತಿವರ್ಷ ಸ್ಥಳೀಯರ ಸಹಕಾರದೊಂದಿಗೆ ಸ್ವಂತ ಹಣದಿಂದ ಅಣೆಕಟ್ಟಿಗೆ ಚೆಕ್ ಡ್ಯಾಂ ನಿರ್ಮಿಸಿ ರಸ್ತೆ ನಿರ್ಮಾಣ ಮಾಡುತ್ತಿದ್ದೇವೆ ಇನ್ನಾದರೂ ಸ್ಥಳೀಯ ಆಡಳಿತ ಎಚ್ಚೆತ್ತು ಕೃಷಿಕರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.
Kshetra Samachara
19/01/2022 03:48 pm