ಪುತ್ತೂರು: 46.70 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಸಣ್ಣ ನೀರಾವರಿ ಇಲಾಖೆಯಿಂದ ನೇತ್ರಾವತಿ ನದಿಗೆ ಬಿಳಿಯೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಬಹುಪಯೋಗಿ ಅಣೆಕಟ್ಟಿನ ಕಾಮಗಾರಿ ಏಪ್ರಿಲ್‍ನಲ್ಲಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಶಾಸಕರು ಇಂದು ಬಿಳಿಯೂರಿನಲ್ಲಿ ಅಣೆಕಟ್ಟು ನಿರ್ಮಾಣ ಕಾಮಗಾರಿ ವೀಕ್ಷಿಸಿ ಪತ್ರಕರ್ತರೊಂದಿಗೆ ಮಾತನಾಡಿದರು.
ಈ ನೀರಾವರಿ, ಕುಡಿಯುವ ನೀರು ಹಾಗೂ ಬಂಟ್ವಾಳ ತಾಲೂಕಿನ ಬಿಳಿಯೂರು, ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮಕ್ಕೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತದೆ ಮತ್ತು ಹತ್ತಿರದ ಮಾರ್ಗವಾಗಲಿದೆ. ಜೊತೆಗೆ ನೇತ್ರಾವತಿ ನದಿ ದಂಡೆಯಲ್ಲಿರುವ ಉಭಯ ತಾಲೂಕುಗಳ ಕೃಷಿ ತೋಟಗಳ ಕೆರೆ, ಬಾವಿಗಳಲ್ಲಿ ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಲಿದೆ. ತೋಟಕ್ಕೆ ಅಣೆಕಟ್ಟಿನಿಂದ ನೀರು ನುಗ್ಗುವ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಲಾಗುವುದು. ಅಲ್ಲದೆ, ಕೃಷಿ ಭೂಮಿ ಮುಳುಗಡೆಯಾದವರಿಗೆ ಸರಕಾರದಿಂದ ಪರಿಹಾರ ವಿತರಿಸಲಾಗುವುದು ಎಂದರು.
ಅಣೆಕಟ್ಟಿನ ತಾಂತ್ರಿಕ ವಿವರ ನೀಡಿದ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕುಮಟ ವಿಷ್ಣುಕಾಮತ್, ಅಣೆಕಟ್ಟಿನ ಮೇಲಿನ ಸೇತುವೆ 5.5 ಅಗಲವಿದ್ದು, ಅಣೆಕಟ್ಟು 42 ಕಿಂಡಿಗಳನ್ನು ಹೊಂದಿದೆ. ಕಿಂಡಿಗಳಿಗೆ ಸ್ವಯಂಚಾಲಿತ ತೂಗಿನ ಬಾಗಿಲು ಅಳವಡಿಸಲಾಗಿದ್ದು ವಿದ್ಯುತ್ ನಿಂದ ನಿರ್ವಹಿಸಲಾಗುತ್ತದೆ. ಪಶ್ಚಿಮ ವಾಹಿನಿ ಯೋಜನೆಯಡಿ ಈ ಅಣೆಕಟ್ಟು ನಿರ್ಮಾಣಗೊಂಡಿದ್ದು, 2.50 ಕಿ.ಮೀ. ವರೆಗೆ ನೀರು ನಿಲ್ಲಲಿದೆ. ಅಣೆಕಟ್ಟಿನಲ್ಲಿ 53.79 ಕ್ಯೂಸೆಕ್ಸ್ ನೀರು ಸಂಗ್ರಹಗೊಳ್ಳಲಿದೆ ಎಂದರು.
Kshetra Samachara
15/01/2022 08:05 pm