ಮುಲ್ಕಿ: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಕುಬೆವೂರು ರೈಲ್ವೆ ಮೇಲ್ಸೇತುವೆ ಬಳಿಯ ಬಸ್ಸುನಿಲ್ದಾಣ ಸಹಿತ ಹೆದ್ದಾರಿ ಬದಿ ಗಿಡಗಂಟಿ ಹುಲ್ಲುಗಳಿಂದ ಆವೃತವಾಗಿದ್ದು ಸಂಚಾರ ದುಸ್ತರವಾಗಿದೆ.
ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿ ಅನೇಕ ತಿರುವುಗಳಿಂದ ಕೂಡಿದ್ದು ಕೆಂಚನಕೆರೆ ಇಳಿಜಾರು ರಸ್ತೆ, ರೈಲ್ವೆ ನಿಲ್ದಾಣ ರಸ್ತೆ ಜಂಕ್ಷನ್, ಅಂಗರಗುಡ್ಡೆ- ಪುನರೂರು ಬಳಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಅವ್ಯವಸ್ಥೆಗಳ ಆಗರವಾಗಿದ್ದು ಹೆದ್ದಾರಿ ಡಾಮಾರೀಕರಣ ನಾಶವಾಗುವ ಭೀತಿಯಲ್ಲಿದೆ.
ಕುಬೆವೂರು ರೈಲ್ವೆ ಮೇಲ್ಸೇತುವೆ ಹಾಗೂ ರೈಲ್ವೆ ನಿಲ್ದಾಣ ರಸ್ತೆ ಜಂಕ್ಷನ್ ಬಳಿಯ ದಾನಿಗಳು ಕಟ್ಟಿಸಿಕೊಟ್ಟ ಬಸ್ಸುನಿಲ್ದಾಣ ಹುಲ್ಲು ಹಾಗೂ ಗಿಡಗಂಟಿಗಳಿಂದ ಆವೃತವಾಗಿ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಅಸಾಧ್ಯವಾಗಿದ್ದು ವಿಷಜಂತುಗಳ ಭೀತಿ ಎದುರಾಗಿದೆ.
ಕುಬೆವೂರು ರೈಲ್ವೆ ಮೇಲ್ಸೇತುವೆ ಜಂಕ್ಷನ್ ಬಳಿ ದಾರಿದೀಪದ ಅವ್ಯವಸ್ಥೆ ಕೂಡ ಕಾಡುತ್ತಿದ್ದು ದಿನೇ ದಿನೇ ದುಷ್ಕರ್ಮಿಗಳು ತ್ಯಾಜ್ಯ ಬಿಸಾಡುತ್ತಿದ್ದು ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದೆ.
ಈ ಬಗ್ಗೆ ಕಿಲ್ಪಾಡಿ ಗ್ರಾಪಂ ಉಪಾಧ್ಯಕ್ಷ ಗೋಪಿನಾಥ ಪಡಂಗ ಮಾತನಾಡಿ ರಾಜ್ಯಹೆದ್ದಾರಿ ಚರಂಡಿ, ಗಿಡಗಂಟಿಗಳು ಬೆಳೆದು ಅವ್ಯವಸ್ಥೆಯಾಗಿರುವ ಬಗ್ಗೆ ಗ್ರಾಮಸ್ಥರಿಂದ ದೂರುಗಳು ಬಂದಿದ್ದು ಇಲಾಖೆಯ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಆದರೆ ಇಲಾಖೆಯ ಅಧಿಕಾರಿಗಳು ಇನ್ನೂ ನಿದ್ರಾವಸ್ಥೆಯಲ್ಲಿದ್ದು ಕೂಡಲೇ ಎಚ್ಚೆತ್ತು ಕೂಡಲೇ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.
Kshetra Samachara
14/09/2021 07:16 pm