ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಸಹಿತ ಅನೇಕ ಕಡೆಗಳಲ್ಲಿ ಆಟೋ ಚಾಲಕರಿಗೆ ಸಿಎನ್ ಜಿ ಗ್ಯಾಸ್ ಅಭಾವ ತಲೆದೋರಿದ್ದು ಮುಗಿಯದ ಗೋಳಾಗಿ ಪರಿಣಮಿಸಿದೆ.
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಆಟೋ ಚಾಲಕರು ಟಿವಿಎಸ್ ಕಂಪೆನಿಯ ಆಟೋಗಳಿಗೆ ಸಿಎನ್ ಜಿ ಗ್ಯಾಸ್ ಅಳವಡಿಸಿಕೊಂಡು ನವೀನ ಮಾದರಿಯ ಆಟೋಗಳನ್ನು ಖರೀದಿ ಮಾಡಿದ್ದು ಗ್ಯಾಸ್ ಅಭಾವದಿಂದ ಕಂಗಾಲಾಗಿದ್ದಾರೆ.
ಮುಲ್ಕಿ ಆಸುಪಾಸಿನಲ್ಲಿ ಇದುವರೆಗೆ ಸುಮಾರು ಐನೂರಕ್ಕೂ ಹೆಚ್ಚು ಟಿವಿಎಸ್ ಕಂಪನಿ ಯ ಆಟೋ ರಸ್ತೆಯಲ್ಲಿ ಓಡಾಡುತ್ತಿದ್ದು ಸಿಎನ್ ಜಿ ಗ್ಯಾಸ್ ಅಭಾವದಿಂದ ಪೆಟ್ರೋಲ್ ಬಂಕ್ ಎದುರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಟೋ ಚಾಲಕರು ದೂರಿದ್ದಾರೆ.
ಮುಲ್ಕಿ ಪರಿಸರದ ಕೊಲ್ನಾಡು ಪೆಟ್ರೋಲ್ ಬಂಕ್ ನಲ್ಲಿ ಮಾತ್ರ ಸೂಕ್ತ ಸಿಎನ್ ಜಿ ಗ್ಯಾಸ್ ಅಳವಡಿಸಲಾಗುತ್ತಿದ್ದು ಉಳಿದಂತೆ ಪಡುಪಣಂಬೂರು, ಉಡುಪಿ ಜಿಲ್ಲೆಯ ಗಡಿಭಾಗದ ಹೆಜಮಾಡಿಯಲ್ಲಿ ಇನ್ನೂ ಸೂಕ್ತವಾಗಿ ಸರಿಯಾದ ರೀತಿಯಲ್ಲಿ ಆರಂಭಗೊಂಡಿಲ್ಲ ಎಂದು ಆಟೋ ಚಾಲಕರು ದೂರಿದ್ದಾರೆ. ಈ ಬಗ್ಗೆ ಪೆಟ್ರೋಲ್ ಬಂಕ್ ಮಾಲೀಕರಲ್ಲಿ ಪ್ರಶ್ನಿಸಿದರೆ ನಮಗೂ ಅದಕ್ಕೂ ಸಂಬಂಧ ಇಲ್ಲ ಎಂದು ಹೇಳುತ್ತಾರೆ.
ಮುಲ್ಕಿ ಕಿನ್ನಿಗೋಳಿ ಕಲ್ಲಮುಂಡ್ಕೋರು ನಿಡ್ಡೋಡಿ ಉಡುಪಿ ಜಿಲ್ಲೆ ಹೆಜಮಾಡಿ, ಬ್ರಹ್ಮಾವರದಿಂದ ಆಟೋ ಚಾಲಕರು ಸಿಎನ್ ಜಿ ಗ್ಯಾಸ್ ಅಳವಡಿಸಲು ಮುಲ್ಕಿಯ ಕೊಲ್ನಾಡು ಪೆಟ್ರೋಲ್ ಬಂಕ್ ಗೆ ಬರುತ್ತಿದ್ದು ಸಿಎನ್ ಜಿ ಗ್ಯಾಸ್ ಅಭಾವದಿಂದ ತಾಸುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಿಎನ್ ಜಿ ಗ್ಯಾಸ್ ಅಭಾವಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕು ಎಂದು ಆಟೋ ಚಾಲಕರು ಒತ್ತಾಯಿಸಿದ್ದಾರೆ.
Kshetra Samachara
31/08/2021 10:56 am