ಉಡುಪಿ: ಆ.19; ಜಿಲ್ಲೆಯ ವಿಕಲಚೇತನರಿಗೆ ವಿತರಿಸಲು ತಂದಿರುವ, ಹೊಸದಾದ 34 ಚರ್ತುಚಕ್ರ ಸ್ಕೂಟರುಗಳು, ಫಲಾನುಭವಿಗಳಿಗೆ ವಿತರಿಸದೆ, ಕಳೆದ ಒಂದು ತಿಂಗಳುಗಳಿಂದ ಬೈಲೂರು ಆಶಾ ನಿಲಯದ ವಠಾರದಲ್ಲಿ ದುಸ್ಥಿತಿಯಲ್ಲಿ ಇಟ್ಟಿರುವುದು ಕಂಡುಬಂದಿದೆ. ಈ ಬಗ್ಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು, ಇಲಾಖೆಯ ಕಾರ್ಯವೈಖರಿ ಕಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ತಕ್ಷಣ ಸ್ಕೂಟರುಗಳನ್ನು ಫಲಾನುಭವಿಗಳಿಗೆ ವಿತರಿಸುವಂತೆ ಆಗ್ರಹಪಡಿಸಿದ್ದಾರೆ.
ಹೊಸದಾದ 14 ಸ್ಕೂಟರುಗಳನ್ನು ಮಳೆ ಬೀಳುವ ಸ್ಥಳದಲ್ಲಿ ಸಾಲಾಗಿ ನಿಲುಗಡೆ ಮಾಡಲಾಗಿದೆ. ಅವುಗಳಿಗೆ ಜಂಗು ಹಿಡಿಯಲಾರಂಬಿಸಿದೆ. ಹಾಗೂ 20 ಸ್ಕೂಟರುಗಳನ್ನು ತಗಡು ಚಪ್ಪರದ ಅಡಿಯಲ್ಲಿ ನಿಲುಗಡೆ ಮಾಡಿಡಲಾಗಿದೆ. ಇವುಗಳಿಗೆ ಧೂಳು ಹಿಡಿದು, ಜೇಡರಬಲೆಗಳು ಕಟ್ಟಿರುವುದು ಕಂಡುಬಂದಿದೆ. ಆಸನಗಳಿಗೆ ಫಂಗಸ್ ಹಿಡಿದಿದ್ದು, ಪಕ್ಷಿಗಳು ಹಿಕ್ಕೆ ಹಾಕಿವೆ. ಇಲ್ಲಿರುವ ಹೊಸ ಸ್ಕೂಟರುಗಳು ಹೊಸತನ ಕಳೆದುಕೊಂಡು, ಅದೆಷ್ಟೋ ಕಿ.ಮೀ ಸಂಚರಿಸುವ ಸ್ಕೂಟರುಗಳಂತೆ ಕಂಡುಬರುತ್ತಿದೆ. ಎಂದು ಸ್ಕೂಟರುಗಳಿಗಾಗಿರುವ ದುಸ್ಥಿತಿಯ ಬಗ್ಗೆ ನಾಗರಿಕ ಸಮಿತಿಯ ಕಾರ್ಯಕರ್ತರು ಹೇಳಿಕೊಂಡಿದ್ದಾರೆ.
Kshetra Samachara
19/08/2021 02:42 pm